ಬೆಂಗಳೂರು: ತನಿಖೆಯ ಸಂದರ್ಭದಲ್ಲಿ ಬ್ಯಾಂಕ್ ಖಾತೆಗಳನ್ನು ‘ಫ್ರೀಜ್’ ಮಾಡಲು ಪೊಲೀಸರಿಗೆ ಅಧಿಕಾರವಿದ್ದು, ಅದಕ್ಕಾಗಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಪೂರ್ವಾನುಮತಿ ಪಡೆಯುವ ಅಗತ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS)ಯ ಸೆಕ್ಷನ್ 106 ಅಡಿಯಲ್ಲಿ ತನಿಖಾಧಿಕಾರಿಗಳಿಗೆ ಬ್ಯಾಂಕ್ ಖಾತೆಗಳು ಸೇರಿದಂತೆ ಆಸ್ತಿಗಳನ್ನು ಜಪ್ತಿ ಮಾಡುವ ಅಧಿಕಾರವಿದೆ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಸ್ಪಷ್ಟಪಡಿಸಿದೆ.
ಜಾರ್ ಗೋಲ್ಡ್ ಕಂಪನಿಯ ಬ್ಯಾಂಕ್ ಖಾತೆಗಳನ್ನು ಪೊಲೀಸರು ಫ್ರೀಜ್ ಮಾಡಿದ್ದ ಕ್ರಮವನ್ನು ರದ್ದುಪಡಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಹಾಗೂ ತನಿಖಾಧಿಕಾರಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ಈ ಆದೇಶ ನೀಡಿದೆ.
ಸೆಕ್ಷನ್ 106ರಡಿ ಪೊಲೀಸರಿಗೆ ಅಧಿಕಾರ
ಹಳೆಯ ಸಿಆರ್ಪಿಸಿ ಸೆಕ್ಷನ್ 102ರ ಹೊಸ ರೂಪವೇ BNSS ಸೆಕ್ಷನ್ 106 ಎಂದು ಹೈಕೋರ್ಟ್ ತಿಳಿಸಿದೆ. ಈ ಸೆಕ್ಷನ್ ಅಡಿಯಲ್ಲಿ ತನಿಖೆಯ ಭಾಗವಾಗಿ ಬ್ಯಾಂಕ್ ಖಾತೆಗಳು ಸೇರಿದಂತೆ ಆಸ್ತಿಗಳನ್ನು ಜಪ್ತಿ ಮಾಡಲು ತನಿಖಾಧಿಕಾರಿಗಳಿಗೆ ಅಧಿಕಾರವಿದೆ. ಆದರೆ, ಪೊಲೀಸರು ಆಸ್ತಿಯನ್ನು ಜಪ್ತಿ ಮಾಡಿದ ಬಳಿಕ ಈ ಕುರಿತು ತಕ್ಷಣವೇ ತಮ್ಮ ಅಧಿಕಾರ ವ್ಯಾಪ್ತಿಯ ಮ್ಯಾಜಿಸ್ಟ್ರೇಟ್ಗೆ ವರದಿ ಸಲ್ಲಿಸಬೇಕು ಎಂದು ಪೀಠ ಸ್ಪಷ್ಟಪಡಿಸಿದೆ.
ಸೆಕ್ಷನ್ 107 ಬೇರೆ ಉದ್ದೇಶಕ್ಕೆ
BNSS ಸೆಕ್ಷನ್ 107ರ ಅಡಿಯಲ್ಲಿ ಆಸ್ತಿ ಮುಟ್ಟುಗೋಲು, ಜಪ್ತಿ ತೆರವು ಹಾಗೂ ಆಸ್ತಿಯ ಮರುಸ್ಥಾಪನೆಗೆ ಸಂಬಂಧಿಸಿದ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಇಂತಹ ಸಂದರ್ಭಗಳಲ್ಲಿ ನ್ಯಾಯಾಲಯದ ಆದೇಶ ಕಡ್ಡಾಯವಾಗಿದೆ ಎಂದು ಹೈಕೋರ್ಟ್ ತಿಳಿಸಿದೆ.
ಸೆಕ್ಷನ್ 106 ಮತ್ತು 107 ಎರಡೂ ಪರಸ್ಪರ ಪೂರಕವಾಗಿವೆಯೇ ಹೊರತು, ಒಂದು ಸೆಕ್ಷನ್ ಮತ್ತೊಂದರ ಅಧಿಕಾರವನ್ನು ನಿಯಂತ್ರಿಸುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.
ಸೈಬರ್ ವಂಚನೆ ಪ್ರಕರಣಗಳಲ್ಲಿ ತ್ವರಿತ ಕ್ರಮ ಅಗತ್ಯ
ಸೈಬರ್ ವಂಚನೆ ಪ್ರಕರಣಗಳಲ್ಲಿ ದೋಚಿದ ಹಣವನ್ನು ಆರೋಪಿಗಳು ಕ್ಷಣಾರ್ಧದಲ್ಲಿ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಪ್ರತಿಯೊಂದು ಖಾತೆಯನ್ನು ಫ್ರೀಜ್ ಮಾಡುವ ಮುನ್ನ ನ್ಯಾಯಾಲಯದ ಪೂರ್ವಾನುಮತಿ ಪಡೆಯಬೇಕೆಂದು ನಿಯಮಿಸಿದರೆ, ತನಿಖೆಗೆ ದೊಡ್ಡ ಹಿನ್ನಡೆಯಾಗಬಹುದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಅಲ್ಲದೆ, ಸಾರ್ವಜನಿಕರ ಜೀವನಪೂರ್ತಿ ಉಳಿತಾಯವನ್ನು ರಕ್ಷಿಸುವ ನಿಟ್ಟಿನಲ್ಲಿ ಪೊಲೀಸರು ತ್ವರಿತವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಪ್ರತಿ ಬಾರಿ ಪೂರ್ವಾನುಮತಿ ಪಡೆಯುವ ನಿಯಮ ಜಾರಿಗೆ ತಂದರೆ ಪ್ರಾಯೋಗಿಕ ಸಮಸ್ಯೆಗಳು ಎದುರಾಗಬಹುದು ಎಂದು ಪೀಠ ವಿವರಿಸಿದೆ.
ಏನಿದು ಪ್ರಕರಣ?
ಅನಿಯಂತ್ರಿತ ಠೇವಣಿ ನಿಷೇಧ ಕಾಯ್ದೆ, 2019ರ ಅಡಿಯಲ್ಲಿ ‘ಜಾರ್ ಗೋಲ್ಡ್ ರಿಟೇಲ್ ಪ್ರೈವೇಟ್ ಲಿಮಿಟೆಡ್’ ವಿರುದ್ಧ ಕೋರಮಂಗಲ ಪೊಲೀಸರು ಪ್ರಕರಣ ದಾಖಲಿಸಿದ್ದರು. ತನಿಖೆಯ ವೇಳೆ ಪೊಲೀಸರು ಕಂಪನಿಗೆ ಸಂಬಂಧಿಸಿದ ಚಿನ್ನ ಹಾಗೂ ಬೆಳ್ಳಿಯನ್ನು ವಶಪಡಿಸಿಕೊಂಡು, ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿದ್ದರು.
ಬಳಿಕ ಬ್ಯಾಂಕ್ ಖಾತೆಗಳ ಫ್ರೀಜ್ ತೆರವುಗೊಳಿಸುವಂತೆ ಬೆಂಗಳೂರು ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಹಾಗೂ ಪೊಲೀಸರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, BNSS ಸೆಕ್ಷನ್ 106ರಡಿ ತನಿಖೆಯ ಸಂದರ್ಭದಲ್ಲಿ ಬ್ಯಾಂಕ್ ಖಾತೆ ಸೇರಿದಂತೆ ಆಸ್ತಿಗಳನ್ನು ಜಪ್ತಿ ಮಾಡಲು ಪೊಲೀಸರಿಗೆ ಅಧಿಕಾರವಿದೆ ಎಂದು ಸ್ಪಷ್ಟಪಡಿಸಿದೆ.



