ವಾಷಿಂಗ್ಟನ್: ಇರಾನ್ ಯುದ್ಧಕ್ಕೆ ಸಂಬಂಧಿಸಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೇಶದ ಜನರನ್ನು ಉದ್ದೇಶಿಸಿ ಭಾಷಣ ಮಾಡಿದ ತಕ್ಷಣವೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ದಿಢೀರ್ ಏರಿಕೆ ಕಂಡುಬಂದಿದೆ.
ಅಮೆರಿಕದ ಕಾಲಮಾನ ಪ್ರಕಾರ ಬುಧವಾರ ರಾತ್ರಿ 9 ಗಂಟೆಗೆ (ಭಾರತೀಯ ಕಾಲಮಾನ ಗುರುವಾರ ಬೆಳಗ್ಗೆ 6.30ಕ್ಕೆ) ಮಾತನಾಡಿದ ಅವರು, ಯುದ್ಧ ಇನ್ನೂ ಎರಡು ರಿಂದ ಮೂರು ವಾರಗಳವರೆಗೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ಈ ಹೇಳಿಕೆಯ ಬೆನ್ನಲ್ಲೇ ತೈಲ ರಫ್ತು ರಾಷ್ಟ್ರಗಳ ಸಂಘಟನೆಯಾದ OPEC ಸದಸ್ಯ ರಾಷ್ಟ್ರಗಳ ಬ್ರೆಂಟ್ ಕಚ್ಚಾ ತೈಲದ ಬೆಲೆ 4.5 ಶೇಕಡಾ ಏರಿಕೆಯಾಗಿ, ಒಂದು ಬ್ಯಾರೆಲ್ (158 ಲೀಟರ್) ದರ 106.42 ಡಾಲರ್ (ಸುಮಾರು 9,930 ರೂಪಾಯಿ) ತಲುಪಿದೆ.
ಅಮೆರಿಕದ ವೆಸ್ಟ್ ಟೆಕ್ಸಾಸ್ ಮಧ್ಯಮ ದರ್ಜೆಯ ಕಚ್ಚಾ ತೈಲದ ದರ ಕೂಡ 4 ಶೇಕಡಾ ಏರಿಕೆಯಾಗಿ 104.24 ಡಾಲರ್ (ಸುಮಾರು 9,732 ರೂಪಾಯಿ) ಮಟ್ಟದಲ್ಲಿ ವ್ಯವಹಾರ ನಡೆಯುತ್ತಿದೆ.
ಇದಕ್ಕೂ ಮೊದಲು ಯುದ್ಧ ಶೀಘ್ರ ಅಂತ್ಯಗೊಳ್ಳಬಹುದು ಎಂದು ಹೇಳಿದ್ದ ಹಿನ್ನೆಲೆಯಲ್ಲಿ, ಬುಧವಾರ ಮಾರುಕಟ್ಟೆಯಲ್ಲಿ ಬ್ರೆಂಟ್ ತೈಲದ ಬೆಲೆ 99ರಿಂದ 100 ಡಾಲರ್ ನಡುವೆ ಇದ್ದರೆ, ವೆಸ್ಟ್ ಟೆಕ್ಸಾಸ್ ತೈಲದ ದರ 98.71 ಡಾಲರ್ ಮಟ್ಟದಲ್ಲಿ ಇತ್ತು.
ತೈಲದ ಬೆಲೆ ಏರಿಕೆ ತಾತ್ಕಾಲಿಕವಾಗಿದೆ ಎಂದು ಹೇಳಿದ ಅವರು, ಇರಾನ್ ನಡೆಸುತ್ತಿರುವ ದಾಳಿಗಳು ವಾಣಿಜ್ಯ ತೈಲ ಸಾಗಣೆ ನೌಕೆಗಳ ಮೇಲೆ ಪರಿಣಾಮ ಬೀರುತ್ತಿರುವುದರಿಂದ ಬೆಲೆ ಏರಿಕೆಯಾಗಿದೆ ಎಂದು ಆರೋಪಿಸಿದರು.
ಯುದ್ಧವು ಇನ್ನೂ ಎರಡು ಅಥವಾ ಮೂರು ವಾರಗಳಲ್ಲಿ ಅಂತ್ಯಗೊಳ್ಳಲಿದೆ. ಅದರ ಬಳಿಕ ತೈಲದ ಬೆಲೆ ತೀವ್ರವಾಗಿ ಇಳಿಕೆಯಾಗಲಿದೆ ಎಂದರು. ಹಾರ್ಮುಜ್ ಜಲಸಂಧಿಯಿಂದ ಬರುವ ತೈಲದ ಅವಶ್ಯಕತೆ ಅಮೆರಿಕಕ್ಕಿಲ್ಲ. ಆ ಮಾರ್ಗದಿಂದ ತೈಲ ಪಡೆಯುವ ಇತರ ರಾಷ್ಟ್ರಗಳೇ ಅದರ ರಕ್ಷಣೆಯ ಜವಾಬ್ದಾರಿ ಹೊತ್ತುಕೊಳ್ಳಬೇಕು ಎಂದು ಹೇಳಿದರು.
ಅಮೆರಿಕವು ವಿಶ್ವದ ಅತಿದೊಡ್ಡ ತೈಲ ಉತ್ಪಾದಕ ರಾಷ್ಟ್ರವಾಗಿದ್ದು, ಜಾಗತಿಕ ತೈಲ ಬೆಲೆ ಏರಿಕೆಯಾದಾಗ ದೇಶಕ್ಕೆ ಆರ್ಥಿಕ ಲಾಭವಾಗುತ್ತದೆ. ಸೌದಿ ಅರೇಬಿಯಾ ಮತ್ತು ರಷ್ಯಾ ದೇಶಗಳನ್ನು ಸೇರಿಸಿದರೂ, ಅಮೆರಿಕ ಹೆಚ್ಚು ಪ್ರಮಾಣದಲ್ಲಿ ತೈಲ ಉತ್ಪಾದಿಸುತ್ತಿದೆ ಎಂದು ಹೇಳಿದರು.
ತೈಲದ ಕೊರತೆಯನ್ನು ಎದುರಿಸುತ್ತಿರುವ ರಾಷ್ಟ್ರಗಳು ಅಮೆರಿಕದಿಂದ ತೈಲ ಖರೀದಿಸಬಹುದು ಎಂದೂ ಹೇಳಿದರು.
ಇರಾನ್ ಶಾಂತಿ ಮಾತುಕತೆಗೆ ಬಾರದಿದ್ದರೆ, ಮುಂದಿನ 2-3 ವಾರಗಳಲ್ಲಿ ಅಲ್ಲಿನ ತೈಲ ಕೇಂದ್ರಗಳು ಮತ್ತು ವಿದ್ಯುತ್ ಘಟಕಗಳ ಮೇಲೆ ತೀವ್ರ ದಾಳಿ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ.



