ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದ ಅಸಹಜ ಸಾವಿನ ಪ್ರಕರಣದ ತನಿಖೆಗೆ ಸಂಬಂಧಿಸಿ, ಕಾಲ್ಪನಿಕ ವಿಚಾರಗಳನ್ನು ಆಧರಿಸಿ ಕೃತಕ ಬುದ್ಧಿಮತ್ತೆಯ ನೆರವಿನಿಂದ ವಿಡಿಯೋ ಸಿದ್ಧಪಡಿಸಿ ಯೂಟ್ಯೂಬ್ ಚಾನೆಲ್ನಲ್ಲಿ ಪ್ರಸಾರ ಮಾಡಿದ್ದ ಆರೋಪದ ಹಿನ್ನೆಲೆಯಲ್ಲಿ ಯೂಟ್ಯೂಬರ್ ಎಂ.ಡಿ. ಸಮೀರ್ ವಿರುದ್ಧ ದಾಖಲಾಗಿದ್ದ ಪ್ರಕರಣದ ತನಿಖೆಗೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಸಮೀರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ, ತನಿಖೆಗೆ ತಡೆ ನೀಡುವುದರ ಜೊತೆಗೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಮುಂದಿನ ವಿಚಾರಣೆಯನ್ನು ಏಪ್ರಿಲ್ 22ಕ್ಕೆ ಮುಂದೂಡಲಾಗಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಯೂಟ್ಯೂಬ್ ಚಾನೆಲ್ ತೆರೆಯುವಾಗ ಸಮೀರ್ನ ವಿಡಿಯೋ ಕಾಣಿಸಿಕೊಂಡಿದ್ದು, ಅದರಲ್ಲಿ ಸುಳ್ಳು ಮಾಹಿತಿಯನ್ನು ಹಂಚಲಾಗಿದೆ ಎಂದು ಹೇಳಲಾಗಿದೆ. ಪೊಲೀಸರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿದ್ದು, ಸಮೀರ್ ಸಾರ್ವಜನಿಕರ ನೆಮ್ಮದಿಯನ್ನು ಭಂಗಪಡಿಸಿದ್ದಾನೆ ಎಂದು ಆರೋಪಿಸಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, “ಸುಮ್ಮನೆ ಇರಲು ಆಗುವುದಿಲ್ಲವೇ? ಯಾರ ನೆಮ್ಮದಿ ಹಾಳಾಗಿದೆ ಎಂಬುದು ತಿಳಿದಿದೆ. ಅದು ಸಾರ್ವಜನಿಕರದು ಅಲ್ಲ. ಅವರದೇ ನೆಮ್ಮದಿ ಯಾಕೆ ನೆಮ್ಮದಿ ಅಲ್ಲ?” ಎಂದು ಪ್ರಶ್ನಿಸಿದೆ.
ಇನ್ನೊಂದೆಡೆ, ಸರ್ಕಾರಿ ವಕೀಲರು ವಾದ ಮಂಡಿಸಿ, ಇದು ಸ್ವಯಂಪ್ರೇರಿತ ಪ್ರಕರಣವಲ್ಲ, ಧರ್ಮಸ್ಥಳ ಪ್ರಕರಣದ ತನಿಖೆಗೆ ಸಂಬಂಧಪಟ್ಟದ್ದಾಗಿದೆ ಎಂದು ಹೇಳಿದರು. ಸಾಕ್ಷಿದಾರರ ರಕ್ಷಣೆ ಸಂಬಂಧಿತ ಪ್ರಕರಣವಾಗಿದ್ದು, ಅದರಲ್ಲಿ ಕೃತಕ ಬುದ್ಧಿಮತ್ತೆ ಬಳಸಿ ಸಮೀರ್ ವಿಡಿಯೋ ನಿರ್ಮಿಸಿದ್ದಾರೆ. ಕೆಲವು ಶವಗಳನ್ನು ಹೂಳಲಾಗಿದೆ ಹಾಗೂ ಕೆಲವು ಸಂಸ್ಕಾರ ಮಾಡಲಾಗಿದೆ ಎಂದು ವಿಡಿಯೋದಲ್ಲಿ ತೋರಿಸಲಾಗಿದೆ ಎಂದು ತಿಳಿಸಿದರು.
ಸಮೀರ್ ವಿರುದ್ಧ ಈಗಾಗಲೇ ಐದು ಪ್ರಕರಣಗಳು ದಾಖಲಾಗಿವೆ. ತನಿಖೆ ಮುಂದುವರಿದರೆ ಸತ್ಯ ಬಹಿರಂಗವಾಗಲಿದೆ. ಇದೇ ಮೊದಲ ಬಾರಿ ಅಲ್ಲ, ಸಾರ್ವಜನಿಕರನ್ನು ದಾರಿ ತಪ್ಪಿಸಿ ದ್ವೇಷದ ವಾತಾವರಣ ನಿರ್ಮಿಸುವ ಕೆಲಸವನ್ನು ಸಮೀರ್ ಮಾಡಿದ್ದಾನೆ ಎಂದು ಸರ್ಕಾರಿ ವಕೀಲರು ಪೀಠಕ್ಕೆ ಮಾಹಿತಿ ನೀಡಿದರು.



