ನವದೆಹಲಿ: ಹಾಸನ ಜಿಲ್ಲೆಯ ವಿಶಿಷ್ಟವಾದ ರಾಜಮುಡಿ ಅಕ್ಕಿಗೆ ಶೀಘ್ರವಾಗಿ ಭೌಗೋಳಿಕ ಸೂಚಕ ಮಾನ್ಯತೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಹಾಸನ ಸಂಸದ ಶ್ರೇಯಸ್ ಪಟೇಲ್ ಮನವಿ ಮಾಡಿದ್ದಾರೆ. ಲೋಕಸಭೆಯಲ್ಲಿ ಮಾತನಾಡಿದ ಅವರು, ರಾಜಮುಡಿ ಅಕ್ಕಿಯ ವೈಶಿಷ್ಟ್ಯ ಮತ್ತು ಅದರ ಮಹತ್ವವನ್ನು ವಿವರಿಸಿದರು.
ಇದೇ ವೇಳೆ, ಜಿಲ್ಲೆಯಲ್ಲಿ ಜೋಳ ಬೆಳೆ ಹಾನಿಯಾಗಿದ್ದರೂ ರೈತರಿಗೆ ಇನ್ನೂ ಪರಿಹಾರ ದೊರೆಯದಿರುವ ವಿಚಾರವನ್ನು ಅವರು ಗಮನಕ್ಕೆ ತಂದರು. ಕಳೆದ ಜೂನ್ ತಿಂಗಳಲ್ಲಿ ಸುಮಾರು 1.1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬೆಳೆ ಬೆಳೆದಿದ್ದು, ಜಿಲ್ಲೆಯ ಬಹುತೇಕ ಎಲ್ಲಾ ತಾಲ್ಲೂಕುಗಳಲ್ಲಿ ಹಾನಿಯಾಗಿದೆ. ಆದರೂ ಇದುವರೆಗೆ ರೈತರಿಗೆ ಯಾವುದೇ ಪರಿಹಾರ ದೊರೆತಿಲ್ಲ ಎಂದು ಅವರು ಹೇಳಿದರು.
ಈ ವಿಳಂಬದ ಕುರಿತು ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅವರು, ಬೆಳೆ ಪರಿಹಾರವನ್ನು ಹಾಲು ಒಕ್ಕೂಟಗಳ ಮೂಲಕ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡುವ ವ್ಯವಸ್ಥೆ ಜಾರಿಗೆ ತರಬೇಕು ಎಂದು ಮನವಿ ಮಾಡಿದರು.
ಹಾಸನ ಜಿಲ್ಲೆಯಲ್ಲಿ ಸುಮಾರು 1.8 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗಿನಕಾಯಿ ಬೆಳೆ ಬೆಳೆಯಲಾಗುತ್ತಿದೆ. ಈ ಬೆಳೆಗಳಿಗೆ ಸೂಕ್ತ ಸಸ್ಯ ಸಂರಕ್ಷಣಾ ಯೋಜನೆಗಳನ್ನು ಜಾರಿಗೊಳಿಸುವುದರ ಜೊತೆಗೆ, ಜಿಲ್ಲೆಯ ಕೃಷಿ ಪ್ರಯೋಗಾಲಯಗಳ ಅಭಿವೃದ್ಧಿಗೆ ಹೆಚ್ಚುವರಿ ಅನುದಾನ ನೀಡಬೇಕು ಎಂದು ಅವರು ಒತ್ತಾಯಿಸಿದರು.



