ನಾಸಿಕ್: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ದಿಂಡೋರಿ ತಾಲ್ಲೂಕಿನಲ್ಲಿ ಭೀಕರ ಅಪಘಾತ ಸಂಭವಿಸಿ, ಒಂದೇ ಕುಟುಂಬದ 9 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಶುಕ್ರವಾರ ತಡರಾತ್ರಿ ಕಾರ್ಯಕ್ರಮ ಮುಗಿಸಿ ಮನೆಗೆ ವಾಪಸಾಗುತ್ತಿದ್ದ ವೇಳೆ ಕಾರು ಬಾವಿಗೆ ಉರುಳಿ ಬಿದ್ದ ಪರಿಣಾಮ ಈ ದುರಂತ ಸಂಭವಿಸಿದೆ. ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಮಾಹಿತಿಯ ಪ್ರಕಾರ, ದಿಂಡೋರಿ ತಾಲೂಕಿನ ಶಿವಾಜಿನಗರ ಪ್ರದೇಶದ ರಾಜ್ ಬ್ಯಾಂಕ್ವೆಟ್ ಹಾಲ್‌ನಲ್ಲಿ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮ ಮುಗಿದ ಬಳಿಕ, ದರ್ಗುಡೆ ಕುಟುಂಬವು ಮಾರುತಿ XL6 ಕಾರಿನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಈ ದುರಂತದಲ್ಲಿ ರೇಷ್ಮಾ ಸುನಿಲ್ ದರ್ಗುಡೆ (27), ಆಶಾ ಅನಿಲ್ ದರ್ಗುಡೆ (32), ಖುಷಿ/ಶ್ರಿಷ್ಟಿ ಅನಿಲ್ ದರ್ಗುಡೆ (14), ಶ್ರೇಯಸ್ ಅನಿಲ್ ದರ್ಗುಡೆ (11), ರಾಖಿ/ಗುಣವಂತಿ ಸುನಿಲ್ ದರ್ಗುಡೆ, ಶ್ರಾವಣಿ ಅನಿಲ್ ದರ್ಗುಡೆ (11), ಸಮೃದ್ಧಿ ರಾಜೇಂದ್ರ ದರ್ಗುಡೆ (7), ಮಾಧುರಿ ಅನಿಲ್ ದರ್ಗುಡೆ (13) ಹಾಗೂ ಸುನಿಲ್ ದತ್ತು ದರ್ಗುಡೆ (32) ಮೃತಪಟ್ಟಿದ್ದಾರೆ. ಮೃತರೆಲ್ಲರೂ ದಿಂಡೋರಿ ತಾಲೂಕಿನ ನಿವಾಸಿಗಳಾಗಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಕಾರು ನಿಯಂತ್ರಣ ಕಳೆದುಕೊಂಡಿರುವುದರಿಂದ ಅಪಘಾತ ಸಂಭವಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಬಳಿಕ ರಕ್ಷಣಾ ಕಾರ್ಯಾಚರಣೆ ತಕ್ಷಣ ಆರಂಭಗೊಂಡಿದ್ದು, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ತಂಡ ಸ್ಥಳಕ್ಕೆ ಧಾವಿಸಿದೆ. ಆದರೆ, ಜನಸಂದಣಿ ಹೆಚ್ಚಿರುವುದರಿಂದ ಕಾರ್ಯಾಚರಣೆಗೆ ಅಡಚಣೆ ಉಂಟಾಗಿದೆ ಎಂದು ತಿಳಿದುಬಂದಿದೆ.
ಈ ಸಂಬಂಧ ದಿಂಡೋರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ನಿಖರ ಕಾರಣವನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.



