ದಾವಣಗೆರೆ: ಕೋಟ್ಯಂತರ ಕಾರ್ಯಕರ್ತರ ಪರಿಶ್ರಮದಿಂದ ಬಿಜೆಪಿ ದೇಶದಲ್ಲಿ ಮತ್ತು ರಾಜ್ಯದಲ್ಲಿ ಅತಿ ದೊಡ್ಡ ಪಕ್ಷವಾಗಿ ಬೆಳೆದುನಿಂತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ಲೇಷಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಬಿಜೆಪಿ ಕಚೇರಿಯಲ್ಲಿ ಇಂದು ಏರ್ಪಡಿಸಿದ ಬಿಜೆಪಿ ಸಂಸ್ಥಾಪಕರ ದಿನಾಚರಣೆಯಲ್ಲಿ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ದೇಶ ಮೊದಲು ಎಂಬ ವಿಚಾರಧಾರೆಯನ್ನು ಮುಂದಿಟ್ಟುಕೊಂಡು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಕೊಡುವ ಚಿಂತನೆಯೊಂದಿಗೆ ಬಿಜೆಪಿ ದೇಶದುದ್ದಕ್ಕೂ ಬೆಳೆದುನಿಂತಿದೆ ಎಂದು ತಿಳಿಸಿದರು.
ದೇಶಕ್ಕೆ ಅನ್ನ ಕೊಡುವ ರೈತ ಎಷ್ಟು ಮುಖ್ಯವೋ, ಈ ದೇಶದ ಗಡಿಯನ್ನು ಕಾಯುವ ಯೋಧರು ಕೂಡ ಅಷ್ಟೇ ಮುಖ್ಯ ಎಂಬ ಭಾವನೆಯಿಂದ ನರೇಂದ್ರ ಮೋದಿಜೀ ಅವರ ದಿಟ್ಟ ನಾಯಕತ್ವದ ಅಡಿಯಲ್ಲಿ ದೇಶ ಮುನ್ನಡೆಸಲಾಗುತ್ತಿದೆ. ಇದಕ್ಕಾಗಿ ನಾವಿಂದು ದೇಶ ಕಾಯುವ ಯೋಧರನ್ನು ಗೌರವಿಸಿದ್ದೇವೆ ಎಂದು ಹೇಳಿದರು.
ವಾಜಪೇಯಿ, ಅಡ್ವಾಣಿ ಅವರ ನೇತೃತ್ವದಲ್ಲಿ ಪಕ್ಷ ಬೆಳೆದುಬಂದುದನ್ನು ಅವರು ವಿವರಿಸಿದರು. ಮಾಜಿ ಸಂಸದ ಮಲ್ಲಿಕಾರ್ಜುನಪ್ಪ ಅವರನ್ನೂ ನಾವು ನೆನಪಿಸಬೇಕಿದೆ. ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ, ಅನಂತಕುಮಾರ್, ವಿ.ಎಸ್.ಆಚಾರ್, ತಂಗ, ಶಂಕರಮೂರ್ತಿ ಅವರು ಸೇರಿ ಅನೇಕ ಹಿರಿಯರ ತಪಸ್ಸು, ಪರಿಶ್ರಮದಿಂದ ನಗರಕ್ಕೆ ಸೀಮಿತವಾಗಿದ್ದ ಬಿಜೆಪಿಯನ್ನು ಹಳ್ಳಿ ಹಳ್ಳಿಗೆ ತೆಗೆದುಕೊಂಡು ಹೋಗಲು ಸಾಧ್ಯವಾಗಿದೆ ಎಂದು ನುಡಿದರು.
ಬಿಜೆಪಿ ದೇಶದಲ್ಲಿ ಮತ್ತು ರಾಜ್ಯದಲ್ಲಿ ಬಹಳ ಬೃಹದಾಕಾರದಲ್ಲಿ ಬೆಳೆದುನಿಂತಿದೆ. ಅನೇಕ ಹಿರಿಯರು ತನು, ಮನ, ಧನವನ್ನು ಅರ್ಪಿಸಿ ತ್ಯಾಗ, ಬಲಿದಾನದ ಮೂಲಕ ಬಿಜೆಪಿ ಇಷ್ಟು ಎತ್ತರಕ್ಕೆ ಬೆಳೆದುನಿಂತಿದೆ ಎಂದು ತಿಳಿಸಿದರು. 25ಕ್ಕೂ ಹೆಚ್ಚು ದೇಶಗಳು ತಮ್ಮ ದೇಶದ ಅತ್ಯುನ್ನತ ಗೌರವವನ್ನು ನಮ್ಮ ಪ್ರಧಾನಿ ಮೋದಿಜೀ ಅವರಿಗೆ ನೀಡಿರುವುದು ನಮಗೆ ಹೆಮ್ಮೆಯ ವಿಚಾರ ಎಂದು ಹೇಳಿದರು.



