HomeKarnataka Newsರಾಯಚೂರಿನಲ್ಲಿ ಆರೋಗ್ಯ ಇಲಾಖೆಯ ಎಡವಟ್ಟು? ತಿಪ್ಪೆ ಸೇರಿದ ರಕ್ತದೊತ್ತಡ, ಮಧುಮೇಹದ ಮಾತ್ರೆಗಳು!

ರಾಯಚೂರಿನಲ್ಲಿ ಆರೋಗ್ಯ ಇಲಾಖೆಯ ಎಡವಟ್ಟು? ತಿಪ್ಪೆ ಸೇರಿದ ರಕ್ತದೊತ್ತಡ, ಮಧುಮೇಹದ ಮಾತ್ರೆಗಳು!

ರಾಯಚೂರು: ಬಡ ರೋಗಿಗಳಿಗೆ ವಿತರಿಸಬೇಕಿದ್ದ ಆರೋಗ್ಯ ಇಲಾಖೆಯ ಔಷಧಿಗಳು ಕಸದ ರಾಶಿಯಲ್ಲಿ ಪತ್ತೆಯಾಗಿರುವ ಘಟನೆ ರಾಯಚೂರು ನಗರದಲ್ಲಿ ಬೆಳಕಿಗೆ ಬಂದಿದೆ.

ನಗರದ ಕೋಟೆಯ ಕಂದಕದ ಬಳಿ, ಬಸವೇಶ್ವರ ವೃತ್ತದ ಸಮೀಪ ವಿವಿಧ ಬಗೆಯ ಔಷಧಿಗಳ ಡಬ್ಬಿಗಳನ್ನು ಎಸೆಯಲಾಗಿದೆ. ಈ ಘಟನೆ ಆರೋಗ್ಯ ಇಲಾಖೆಯ ಔಷಧಿಗಳ ದಾಸ್ತಾನು ಮತ್ತು ನಿರ್ವಹಣೆಯ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಕಸದ ರಾಶಿಯಲ್ಲಿ ಪತ್ತೆಯಾಗಿರುವ ಔಷಧಿಗಳಲ್ಲಿ ರಕ್ತದೊತ್ತಡ ಮತ್ತು ಮಧುಮೇಹದಂತಹ ಕಾಯಿಲೆಗಳಿಗೆ ಬಳಸುವ ಮಾತ್ರೆಗಳೂ ಸೇರಿವೆ. ಆರೋಗ್ಯ ಇಲಾಖೆಯ ಮೂಲಕ ವಿವಿಧ ಆರೋಗ್ಯ ಕೇಂದ್ರಗಳಿಗೆ ಸರಬರಾಜು ಮಾಡಲಾಗಿದ್ದ ಈ ಔಷಧಿಗಳು ಬಳಕೆಯಾಗದೆ ಅವಧಿ ಮೀರಿವೆ ಎನ್ನಲಾಗಿದೆ. ಇದೇ ಸೆಪ್ಟೆಂಬರ್‌ನಲ್ಲಿ ಅವಧಿ ಮುಗಿದಿರುವ ಔಷಧಿಗಳೂ ಅಲ್ಲಿ ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಔಷಧಿಗಳ ಎಸೆತ:

ಅವಧಿ ಮೀರಿದ ಔಷಧಿಗಳನ್ನು ನಿಯಮಾನುಸಾರ ಸುರಕ್ಷಿತವಾಗಿ ವಿಲೇವಾರಿ ಮಾಡಬೇಕಾಗುತ್ತದೆ. ಆದರೆ, ಸಾರ್ವಜನಿಕರು ಹಾಗೂ ಜಾನುವಾರುಗಳು ಸಂಚರಿಸುವ ಪ್ರದೇಶದಲ್ಲಿ ಔಷಧಿಗಳನ್ನು ಎಸೆಯಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಔಷಧಿಗಳ ವಿಲೇವಾರಿ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಪಾಲಿಸಲಾಗಿದೆಯೇ ಎಂಬ ಪ್ರಶ್ನೆ ಎದುರಾಗಿದೆ.

ಆರೋಗ್ಯ ಕೇಂದ್ರಗಳಿಗೆ ಪೂರೈಕೆಯಾಗಿದ್ದ ಔಷಧಿಗಳು ಬಳಕೆಯಾಗದೆ ಅವಧಿ ಮುಗಿಯುವವರೆಗೂ ಉಳಿದಿದ್ದೇಕೆ? ಔಷಧಿಗಳ ದಾಸ್ತಾನು ಮತ್ತು ವಿತರಣೆಯ ಮೇಲ್ವಿಚಾರಣೆಯಲ್ಲಿ ನಿರ್ಲಕ್ಷ್ಯ ನಡೆದಿದೆಯೇ? ಇಂತಹ ಹಲವು ಪ್ರಶ್ನೆಗಳು ಸಾರ್ವಜನಿಕರಲ್ಲಿ ಮೂಡಿವೆ.

ಪದೇಪದೇ ಮರುಕಳಿಸುತ್ತಿರುವ ಘಟನೆ:

ರಾಯಚೂರು ನಗರದಲ್ಲಿ ಈ ಹಿಂದೆ ಕೂಡ ಇಂತಹ ಘಟನೆಗಳು ನಡೆದಿವೆ ಎನ್ನಲಾಗಿದ್ದು, ಮತ್ತೆ ಔಷಧಿಗಳು ಕಸದ ರಾಶಿಯಲ್ಲಿ ಪತ್ತೆಯಾಗಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಡ ರೋಗಿಗಳಿಗೆ ಉಪಯೋಗವಾಗಬೇಕಿದ್ದ ಔಷಧಿಗಳು ಬಳಕೆಯಾಗದೆ ವ್ಯರ್ಥವಾಗುತ್ತಿರುವುದಕ್ಕೆ ಯಾರು ಹೊಣೆ ಎಂಬ ಪ್ರಶ್ನೆಯನ್ನೂ ಎತ್ತಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳ ಪ್ರತಿಕ್ರಿಯೆ ಹಾಗೂ ಔಷಧಿಗಳನ್ನು ಎಸೆದವರ ಕುರಿತು ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಘಟನೆ ಬಗ್ಗೆ ಪರಿಶೀಲನೆ ನಡೆಸಿ, ತಪ್ಪಿತಸ್ಥರಿದ್ದರೆ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬಂದಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img