ರಾಯಚೂರು: ರೋಗಿಗಳಿಗೆ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸಬೇಕಾದ ರಾಯಚೂರಿನ ಸರ್ಕಾರಿ ಓಪೆಕ್ ಆಸ್ಪತ್ರೆಯಲ್ಲಿ ನಿರ್ಲಕ್ಷ್ಯದ ಆರೋಪ ಕೇಳಿಬಂದಿದೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯ ತಲೆಯ ಗಾಯದಲ್ಲಿ ಹುಳುಗಳು ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಇದರಿಂದ ಆಕ್ರೋಶಗೊಂಡಿರುವ ಕುಟುಂಬಸ್ಥರು ಆಸ್ಪತ್ರೆಯ ಸಿಬ್ಬಂದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಪಘಾತದ ಬಳಿಕ ಆಸ್ಪತ್ರೆಗೆ ದಾಖಲು:
ಯಾದಗಿರಿ ಮೂಲದ ಮಹೇಶ್ವರಿ (30) ಅವರು ಅಕ್ಟೋಬರ್ 9ರಂದು ಸಂಭವಿಸಿದ ಅಪಘಾತದಲ್ಲಿ ತಲೆಗೆ ಗಂಭೀರ ಗಾಯ ಮಾಡಿಕೊಂಡಿದ್ದರು. ಅವರನ್ನು ರಾಯಚೂರಿನ ಸರ್ಕಾರಿ ಓಪೆಕ್ ಆಸ್ಪತ್ರೆಯ ಟ್ರಾಮಾ ಕೇರ್ ಸೆಂಟರ್ನ ಐಸಿಯುನಲ್ಲಿ ದಾಖಲಿಸಲಾಗಿತ್ತು.
ಆದರೆ, ಕಳೆದ ಮೂರು ದಿನಗಳಿಂದ ತಜ್ಞ ವೈದ್ಯರಿಂದ ಸೂಕ್ತ ಚಿಕಿತ್ಸೆ ದೊರೆತಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಶುಕ್ರವಾರ ರಾತ್ರಿ ಗಾಯಕ್ಕೆ ಬ್ಯಾಂಡೇಜ್ ಹಾಕಿದ ಬಳಿಕ ಸರಿಯಾಗಿ ಡ್ರೆಸ್ಸಿಂಗ್ ಮಾಡಿಲ್ಲ ಎಂಬುದು ಅವರ ದೂರಾಗಿದೆ. ಬಳಿಕ ಸ್ಕ್ಯಾನಿಂಗ್ ವೇಳೆ ತಲೆಯ ಗಾಯದ ಜಾಗದಲ್ಲಿ ಹುಳುಗಳು ಪತ್ತೆಯಾಗಿದ್ದು, ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಐಸಿಯುನಲ್ಲೂ ಮೂಲಸೌಕರ್ಯಗಳ ಕೊರತೆ ಆರೋಪ:
ತಜ್ಞ ವೈದ್ಯರು ರಜೆಯಲ್ಲಿದ್ದಾರೆ ಎಂದು ಸಿಬ್ಬಂದಿ ಹೇಳುತ್ತಾ ಕಾಲಹರಣ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೆ, ಸ್ಕ್ಯಾನಿಂಗ್ಗಾಗಿ ರೋಗಿಗಳು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿಯಿದೆ ಎಂದು ದೂರಿದ್ದಾರೆ.
ಐಸಿಯು ವಾರ್ಡ್ನಲ್ಲಿ ಫ್ಯಾನ್ಗಳಿಲ್ಲದ ಕಾರಣ ರೋಗಿಗಳಿಗೆ ಅವರ ಸಂಬಂಧಿಕರೇ ಸೀರೆಯ ಸೆರಗಿನಿಂದ ಗಾಳಿ ಬೀಸಬೇಕಾದ ಪರಿಸ್ಥಿತಿ ಇದೆ ಎಂಬ ಆರೋಪವೂ ಕೇಳಿಬಂದಿದೆ.
ಕ್ರಮಕ್ಕೆ ಸಾರ್ವಜನಿಕರ ಒತ್ತಾಯ:
ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಕರ್ತವ್ಯಲೋಪ ಎಸಗಿರುವ ವೈದ್ಯರು ಮತ್ತು ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಜೊತೆಗೆ, ಮಹಿಳೆಗೆ ಅಗತ್ಯ ಚಿಕಿತ್ಸೆ ಒದಗಿಸಿ ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಸುಧಾರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಆಸ್ಪತ್ರೆಯ ನಿರ್ಲಕ್ಷ್ಯದ ಕುರಿತು ಕೇಳಿಬಂದಿರುವ ಆರೋಪಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಪ್ರತಿಕ್ರಿಯೆ ಲಭ್ಯವಾಗಬೇಕಿದೆ.



