ಬೆಂಗಳೂರು: ಗಾಳಿಪಟದ ಮಾಂಜಾ ದಾರದಲ್ಲಿ ಸಿಲುಕಿ ನಾಲ್ಕು ದಿನಗಳಿಂದ ಹೈಟೆನ್ಷನ್ ವಿದ್ಯುತ್ ತಂತಿಯಲ್ಲಿ ನೇತಾಡುತ್ತಿದ್ದ ಹದ್ದೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ.
ಬನ್ನೇರುಘಟ್ಟ ರಸ್ತೆಯ ವಿವರ್ಸ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.
ಗಾಳಿಪಟದ ಮಾಂಜಾ ದಾರ ಹೈಟೆನ್ಷನ್ ವೈರ್ಗೆ ಸಿಲುಕಿಕೊಂಡಿತ್ತು. ಇದೇ ದಾರದಲ್ಲಿ ಹದ್ದು ಸಿಲುಕಿಕೊಂಡು ಹಾರಲಾಗದೆ ನಾಲ್ಕು ದಿನಗಳಿಂದ ತಂತಿಯ ಮೇಲೆಯೇ ನೇತಾಡುತ್ತಿತ್ತು. ಆಹಾರ, ನೀರಿಲ್ಲದೆ ಹದ್ದು ನರಳಾಡುತ್ತಿತ್ತು.
ಹದ್ದಿನ ಸ್ಥಿತಿಯನ್ನು ಗಮನಿಸಿದ ಸ್ಥಳೀಯ ವಿಕಾಸ್ ಎಂಬುವವರು ತಕ್ಷಣ ಬನ್ನೇರುಘಟ್ಟ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅರಣ್ಯ ಇಲಾಖೆ, ಬೆಸ್ಕಾಂ ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಎಚ್ಚರಿಕೆಯಿಂದ ಮಾಂಜಾ ದಾರವನ್ನು ಕತ್ತರಿಸಿ ಹದ್ದನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ.
ನಾಲ್ಕು ದಿನಗಳಿಂದ ಆಹಾರವಿಲ್ಲದೆ ನಿತ್ರಾಣಗೊಂಡಿರುವ ಹದ್ದಿಗೆ ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ. ಚೇತರಿಸಿಕೊಂಡ ಬಳಿಕ ಅದನ್ನು ಮತ್ತೆ ಕಾಡಿಗೆ ಬಿಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಪಕ್ಷಿಗಳು ಹಾಗೂ ಸಾರ್ವಜನಿಕರ ಜೀವಕ್ಕೆ ಅಪಾಯಕಾರಿಯಾಗಿರುವ ಮಾಂಜಾ ದಾರವನ್ನು ಬಳಸಬಾರದು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.








