ಗದಗ: ಭಾರತೀಯ ಸೇನೆಯಲ್ಲಿ ಸತತ 23 ವರ್ಷಗಳ ಕಾಲ ಸೇವೆ ಸಲ್ಲಿಸುವ ಮೂಲಕ ದೇಶದ ಗಡಿಯನ್ನು ಕಾಯ್ದ ವೀರಯೋಧ ಮೈಬುಸಾಬ ಎಂ. ಹೆಬ್ಬಳ್ಳಿ ಅವರು ಡಿ.1ರಂದು ತಾಯ್ನಾಡಿಗೆ ಮರಳುತ್ತಿದ್ದಾರೆ. ಗದಗ ತಾಲೂಕಿನ ಹುಯಿಲಗೋಳ ಗ್ರಾಮದ ಹೆಮ್ಮೆಯ ಪುತ್ರನ ಆಗಮನಕ್ಕೆ ಕುಟುಂಬಸ್ಥರು, ಸ್ನೇಹಿತರು ಹಾಗೂ ಗ್ರಾಮಸ್ಥರು ಸಂಭ್ರಮದ ಸ್ವಾಗತಕ್ಕೆ ಸಜ್ಜಾಗಿದ್ದಾರೆ.
ಜಮ್ಮು-ಕಾಶ್ಮೀರ, ಪಂಜಾಬ್, ರಾಜಸ್ಥಾನ ಸೇರಿದಂತೆ ದೇಶದ ವಿವಿಧ ಗಡಿ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಮೈಬುಸಾಬ ಅವರು ಹವಾಲ್ದಾರ್ ಹುದ್ದೆಯಲ್ಲಿ 23 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಡಿ.1ರಂದು ಬೆಳಿಗ್ಗೆ 9 ಗಂಟೆಗೆ ಹುಯಿಲಗೋಳ ಗ್ರಾಮಕ್ಕೆ ಆಗಮಿಸಲಿರುವ ವೀರಯೋಧನನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲು ಗ್ರಾಮದಲ್ಲಿ ಸಿದ್ಧತೆಗಳು ನಡೆದಿವೆ. ಅವರ ದೇಶಸೇವೆಯನ್ನು ಗೌರವಿಸುವ ನಿಟ್ಟಿನಲ್ಲಿ ಗದಗ ಹಾಗೂ ಹುಯಿಲಗೋಳ ಗ್ರಾಮದಲ್ಲಿ ಸ್ವಾಗತ ಬ್ಯಾನರ್ಗಳನ್ನು ಅಳವಡಿಸಿ ಸಂಭ್ರಮದ ವಾತಾವರಣ ನಿರ್ಮಿಸಲಾಗಿದೆ.
23 ವರ್ಷಗಳ ಕಾಲ ದೇಶದ ಗಡಿಯಲ್ಲಿ ಕರ್ತವ್ಯ ನಿರ್ವಹಿಸಿ ತಾಯ್ನಾಡಿಗೆ ಮರಳುತ್ತಿರುವ ವೀರಯೋಧನ ಆಗಮನ ಗ್ರಾಮಸ್ಥರಲ್ಲಿ ಹೆಮ್ಮೆ, ಅಭಿಮಾನ ಹಾಗೂ ಸಂತಸ ಮೂಡಿಸಿದೆ.









