ಬೆಂಗಳೂರು: ಮೈಸೂರು ರಸ್ತೆಯ ಸಾಟಲೈಟ್ ಬಸ್ ನಿಲ್ದಾಣದ ಸಿಗ್ನಲ್ ಬಳಿ ನಿಲ್ಲಿಸಿದ್ದ ಲಾರಿಗೆ ಹಿಂಬದಿಯಿಂದ ಮತ್ತೊಂದು ಲಾರಿ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.
ಮೃತರನ್ನು ವಿಜಯ್ ಕುಮಾರ್ (60) ಎಂದು ಗುರುತಿಸಲಾಗಿದೆ. ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಫ್ಲೈಓವರ್ ಇಳಿಯುವಾಗಲೇ ನಿಯಂತ್ರಣ ಕಳೆದುಕೊಂಡ ಹಿಂಬದಿ ಲಾರಿ, ಸಿಗ್ನಲ್ ಬಳಿ ನಿಂತಿದ್ದ ಲಾರಿಗೆ ಭಾರೀ ವೇಗದಲ್ಲಿ ಗುದ್ದಿದೆ.
ಸ್ವಿಗ್ಗಿ ಇನ್ಸ್ಟಾಮಾರ್ಟ್‌ಗೆ ತರಕಾರಿ ಸಾಗಿಸುತ್ತಿದ್ದ ಈ ಲಾರಿ ಕೋಲಾರದ ಮಾಲೂರಿನಿಂದ ಆರ್‌ಆರ್ ನಗರ ಕಡೆಗೆ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಚಾಲಕ ವಿಜಯ್ ಕುಮಾರ್ ಅವರ ದೇಹ ನಜ್ಜುಗುಜ್ಜಾಗಿದೆ.
ಅಪಘಾತದ ಬಳಿಕ ಸಂಚಾರಿ ಪೊಲೀಸರು ವಾಹನವನ್ನು ತೆರವುಗೊಳಿಸಿದ್ದು, ಮೃತದೇಹವನ್ನು ಕೆಆರ್ ಮಾರುಕಟ್ಟೆಯ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ಕುರಿತು ತನಿಖೆ ಮುಂದುವರಿದಿದೆ.



