ಬೆಂಗಳೂರು: ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಲು ಬಯಸುವ ಪ್ರವಾಸಿಗರಿಗೆ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ವಿಶೇಷ ಅವಕಾಶ ನೀಡಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಿಂದ ಕರಾವಳಿಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಹಲವು ಪ್ರಮುಖ ಸ್ಥಳಗಳಿಗೆ 2 ದಿನಗಳ ‘ಪ್ರೀಮಿಯಂ ಪ್ರವಾಸ ಪ್ಯಾಕೇಜ್’ ಅನ್ನು ಘೋಷಿಸಿದೆ.
ಎಸಿ ಡಿಲಕ್ಸ್ ಕೋಚ್ ಮೂಲಕ ನಡೆಯುವ ಈ ಪ್ರವಾಸದಲ್ಲಿ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ವಿಶೇಷ ದರ್ಶನ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಆದಿ ಸುಬ್ರಹ್ಮಣ್ಯ, ಸೌತಡ್ಕ ಮಹಾಗಣಪತಿ ದೇವಸ್ಥಾನ ಸೇರಿದಂತೆ ಹಲವು ಪುಣ್ಯಕ್ಷೇತ್ರಗಳ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಪ್ರವಾಸದ ಪ್ರಮುಖ ಸ್ಥಳಗಳು:
- ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನ (ವಿಐಪಿ ವಿಶೇಷ ದರ್ಶನ)
- ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ
- ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಆದಿ ಸುಬ್ರಹ್ಮಣ್ಯ
- ಆದಿಚುಂಚನಗಿರಿ ಕ್ಷೇತ್ರ
- ಐತಿಹಾಸಿಕ ಮಂಜರಾಬಾದ್ ಕೋಟೆ
- ರಾಮ ಕ್ಷೇತ್ರ
- ಸೂರ್ಯನಾರಾಯಣ ದೇವಸ್ಥಾನ
- ಶ್ರೀ ಶಿಶಿಲೇಶ್ವರ ದೇವಸ್ಥಾನ
ಪ್ರವಾಸದ ವೇಳಾಪಟ್ಟಿ:
ಮೊದಲ ದಿನ ಬೆಳಗ್ಗೆ 7.30ಕ್ಕೆ ಬೆಂಗಳೂರಿನ ಯಶವಂತಪುರ ಬಿಎಂಟಿಸಿ ಟಿಟಿಎಂಸಿ ಬಳಿಯ ಕೆಎಸ್ಟಿಡಿಸಿ ಬುಕಿಂಗ್ ಕೌಂಟರ್ನಿಂದ ಎಸಿ ಬಸ್ ಪ್ರಯಾಣ ಆರಂಭವಾಗಲಿದೆ. ಮಾರ್ಗಮಧ್ಯೆ ಆದಿಚುಂಚನಗಿರಿ ದೇವಸ್ಥಾನ ಹಾಗೂ ಮಂಜರಾಬಾದ್ ಕೋಟೆ ವೀಕ್ಷಣೆ ಬಳಿಕ ಸಂಜೆ ಧರ್ಮಸ್ಥಳ ತಲುಪಿ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ.
ಎರಡನೇ ದಿನ ಬೆಳಗ್ಗೆ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದ ವಿಶೇಷ ದರ್ಶನದ ಬಳಿಕ ರಾಮ ಕ್ಷೇತ್ರ, ಸೂರ್ಯನಾರಾಯಣ ದೇವಸ್ಥಾನ, ಶಿಶಿಲೇಶ್ವರ ದೇವಸ್ಥಾನ ಹಾಗೂ ಸೌತಡ್ಕ ಗಣಪತಿ ದೇವಸ್ಥಾನಗಳಿಗೆ ಭೇಟಿ ನೀಡಲಾಗುತ್ತದೆ. ಸಂಜೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ದರ್ಶನ ಮುಗಿಸಿ ಬೆಂಗಳೂರಿನತ್ತ ಪ್ರಯಾಣ ಆರಂಭಿಸಲಾಗುತ್ತದೆ.
ಪ್ಯಾಕೇಜ್ನಲ್ಲಿ ಸೌಲಭ್ಯಗಳು:
- ಎಸಿ ಡಿಲಕ್ಸ್ ಬಸ್ ಪ್ರಯಾಣ
- ದೇವಸ್ಥಾನಗಳ ವಿಶೇಷ ದರ್ಶನ ಟಿಕೆಟ್
- ಧರ್ಮಸ್ಥಳದಲ್ಲಿ ವಸತಿ ವ್ಯವಸ್ಥೆ
- ಎರಡನೇ ದಿನದ ಬೆಳಗಿನ ಉಪಾಹಾರ
ಪ್ಯಾಕೇಜ್ನಲ್ಲಿ ಸೇರಿರದ ವೆಚ್ಚಗಳು:
- ಮಧ್ಯಾಹ್ನ ಹಾಗೂ ರಾತ್ರಿ ಊಟದ ವೆಚ್ಚ
- ವೈಯಕ್ತಿಕ ಖರೀದಿ ಮತ್ತು ಇತರೆ ಖರ್ಚು
- ವೇಳಾಪಟ್ಟಿಯಲ್ಲಿ ಇಲ್ಲದ ಹೆಚ್ಚುವರಿ ಸ್ಥಳಗಳ ಭೇಟಿ
ಪ್ರವಾಸಿಗರು ಮಾನ್ಯ ಗುರುತಿನ ಚೀಟಿ ಕಡ್ಡಾಯವಾಗಿ ಕೊಂಡೊಯ್ಯಬೇಕು. ದೇವಸ್ಥಾನಗಳಿಗೆ ಭೇಟಿ ನೀಡುವಾಗ ಸಾಂಪ್ರದಾಯಿಕ ವಸ್ತ್ರ ಸಂಹಿತೆ ಪಾಲಿಸಬೇಕು ಎಂದು KSTDC ಸೂಚಿಸಿದೆ. ಭಕ್ತರ ದಟ್ಟಣೆ ಹಾಗೂ ಸಂಚಾರ ಪರಿಸ್ಥಿತಿಗೆ ಅನುಗುಣವಾಗಿ ಸಮಯದಲ್ಲಿ ಬದಲಾವಣೆ ಸಾಧ್ಯ ಎಂದು ತಿಳಿಸಿದೆ.



