ಕಾರವಾರ: ಆಸ್ತಿಯಲ್ಲಿ ಪಾಲು ಕೇಳಿದ ವ್ಯಕ್ತಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಶಿರಸಿಯ ಪ್ರಥಮ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಬಿದ್ರಳ್ಳಿ ಗ್ರಾಮದ ಕೇಶವ ಪಾಂಡುರಂಗ ಕಿತ್ತೂರಕರ್ ತಮ್ಮ ಆಸ್ತಿಯಲ್ಲಿ ಪಾಲು ಕೇಳಿದ್ದರು. ಇದನ್ನು ತಪ್ಪಿಸುವ ಉದ್ದೇಶದಿಂದ ಅಕ್ಷಯ ಅಲಿಯಾಸ್ ಆಕಾಶ ಪಾಂಡುರಂಗ ಕಿತ್ತೂರಕರ್, ಪಾಂಡುರಂಗ ಕೀರಪ್ಪ ಕಿತ್ತೂರಕರ್ ಹಾಗೂ ಲತಾ ತುಳಸಾಯಿ ಪಾಂಡುರಂಗ ಕಿತ್ತೂರಕರ್ ಸೇರಿ ಐವರು ಸಂಚು ರೂಪಿಸಿ ಅವರನ್ನು ಕೊಲೆ ಮಾಡಿದ್ದರು.
ಈ ಸಂಬಂಧ ಹಳಿಯಾಳ ಪೊಲೀಸ್ ಠಾಣೆಯಲ್ಲಿ 2019ರ ಅಕ್ಟೋಬರ್ 15ರಂದು ಪ್ರಕರಣ ದಾಖಲಾಗಿತ್ತು. ಅಂದಿನ ತನಿಖಾಧಿಕಾರಿ ಪೊಲೀಸ್ ನಿರೀಕ್ಷಕ ಬಿ.ಎಸ್. ಲೋಕಾಪುರ ಅವರು ತನಿಖೆ ನಡೆಸಿ, ಸಾಕ್ಷ್ಯಾಧಾರಗಳೊಂದಿಗೆ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಕಾರವಾರ ಪೀಠದ ಯಲ್ಲಾಪುರದ ಪ್ರಥಮ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಿರಣ ಕಿಣಿ ಅವರು ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ರಾಜೇಶ್ ಮಳಗಿಕರ್ ವಾದ ಮಂಡಿಸಿದ್ದರು.



