ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ತಡರಾತ್ರಿ ಪುಂಡರ ಗುಂಪೊಂದು ಗಲಾಟೆ ನಡೆಸಿ ಮೂವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.
ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಗೌಡನಪಾಳ್ಯದಲ್ಲಿ ಈ ಘಟನೆ ನಡೆದಿದೆ.
ಕಲಾವಿದೆ ಸೌಮ್ಯ ಅವರ ಕುಟುಂಬಸ್ಥರ ಮೇಲೆ ಸ್ಥಳೀಯ ಆರರಿಂದ ಏಳು ಮಂದಿ ಯುವಕರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಇಬ್ಬರಿಗೆ ಚಾಕುವಿನಿಂದ ಇರಿಯಲಾಗಿದ್ದು, ಮತ್ತೊಬ್ಬರಿಗೆ ಹೆಲ್ಮೆಟ್ನಿಂದ ಹೊಡೆದು ಹಲ್ಲೆ ಮಾಡಲಾಗಿದೆ.
ಸೌಮ್ಯ ಅವರ ಮನೆಗೆ ರಾತ್ರಿ ಊಟಕ್ಕೆ ಬಂದಿದ್ದ ಸಹೋದರರಾದ ಸ್ಯಾಮ್ ಮತ್ತು ಮಾರ್ಟಿನ್, ಊಟ ಮುಗಿಸಿ ವಾಪಸ್ ತೆರಳುವಾಗ ಸ್ಥಳೀಯ ಯುವಕರೊಂದಿಗೆ ಪಾರ್ಕಿಂಗ್ ವಿಚಾರವಾಗಿ ಗಲಾಟೆ ಆರಂಭವಾಗಿದೆ. ಈ ವೇಳೆ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದ್ದು, ಸೌಮ್ಯ ಅವರ ಪತಿ ಭಾನುಪ್ರಕಾಶ್ ಹಾಗೂ ಇಬ್ಬರು ಸಹೋದರರ ಮೇಲೆ ಯುವಕರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಆರೋಪಿಗಳು ಚಾಕು, ಡ್ರ್ಯಾಗರ್ ಹಾಗೂ ಹೆಲ್ಮೆಟ್ ಬಳಸಿ ಹಲ್ಲೆ ನಡೆಸಿದ್ದು, ಬಳಿಕ ಮೊಬೈಲ್ ಫೋನ್ ಕಿತ್ತುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ಸುಬ್ರಹ್ಮಣ್ಯಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ನಂಬರ್ ಪ್ಲೇಟ್ ಇಲ್ಲದ ಆಟೋ ಹಾಗೂ ಮದ್ಯದ ಬಾಟಲಿಗಳು ಪತ್ತೆಯಾಗಿವೆ. ಅಲ್ಲದೆ, ಡ್ರ್ಯಾಗರ್ ಮತ್ತು ಮೊಬೈಲ್ ಫೋನ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.










