ಬೆಂಗಳೂರು: ಗೌರವಧನ ಹೆಚ್ಚಳಕ್ಕಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದ ಆಶಾ ಕಾರ್ಯಕರ್ತೆಯರಿಗೆ ಕೊನೆಗೂ ಸಿಹಿಸುದ್ದಿ ಸಿಕ್ಕಿದೆ.
ಅವರ ನಿರಂತರ ಪ್ರತಿಭಟನೆಗೆ ಸ್ಪಂದಿಸಿರುವ ರಾಜ್ಯ ಸರ್ಕಾರ, ಮಾಸಿಕ ಗೌರವಧನವನ್ನು 2,000 ರೂ. ಹೆಚ್ಚಿಸುವ ಕುರಿತು ಅಧಿಕೃತ ಲಿಖಿತ ಟಿಪ್ಪಣಿ ಬಿಡುಗಡೆ ಮಾಡಿದೆ.
ಕಳೆದ 13 ದಿನಗಳಿಂದ ಆಶಾ ಕಾರ್ಯಕರ್ತೆಯರು ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರು. ಸರ್ಕಾರ ಮೌಖಿಕ ಭರವಸೆ ನೀಡಿದ್ದರೂ, ಅದಕ್ಕೆ ಒಪ್ಪದ ಕಾರ್ಯಕರ್ತೆಯರು ಲಿಖಿತ ಆದೇಶ ನೀಡುವಂತೆ ಪಟ್ಟು ಹಿಡಿದಿದ್ದರು. ಇದೀಗ ಮುಖ್ಯಮಂತ್ರಿಗಳ ಕಾರ್ಯದರ್ಶಿ ಎಸ್.ಎಸ್. ನಕುಲ್ ಅವರು ಅಧಿಕೃತ ಟಿಪ್ಪಣಿ ಹೊರಡಿಸುವ ಮೂಲಕ ಹೆಚ್ಚಳಕ್ಕೆ ಸಂಬಂಧಿಸಿದ ಸ್ಪಷ್ಟನೆ ನೀಡಿದ್ದಾರೆ.
ನವೆಂಬರ್ 28ರಂದು ಮುಖ್ಯಮಂತ್ರಿ ಅವರು ಆಶಾ ಕಾರ್ಯಕರ್ತೆಯರ ಪ್ರತಿನಿಧಿಗಳೊಂದಿಗೆ ಸವಿವರ ಸಭೆ ನಡೆಸಿದ್ದರು. ಈ ವೇಳೆ ಅವರ ಬೇಡಿಕೆಗಳನ್ನು ಆಲಿಸಿ, ಮಾಸಿಕ ಗೌರವಧನವನ್ನು 2,000 ರೂ. ಹೆಚ್ಚಿಸಲು ನಿರ್ಧರಿಸಿದ್ದರು.
ಅದರಂತೆ 2027ರ ಜನವರಿ 1ರಿಂದಲೇ ಹೆಚ್ಚುವರಿ ಗೌರವಧನ ಜಾರಿಗೆ ಬರಲಿದೆ. ಈ ಸಂಬಂಧ ಅಗತ್ಯ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿಗಳ ಕಚೇರಿ ಸೂಚನೆ ನೀಡಿದೆ. 13 ದಿನಗಳ ಹೋರಾಟದ ಬಳಿಕ ಲಿಖಿತ ಭರವಸೆ ಸಿಕ್ಕಿರುವುದು ಆಶಾ ಕಾರ್ಯಕರ್ತೆಯರಲ್ಲಿ ನಿರಾಳತೆ ಮೂಡಿಸಿದೆ.









