ಚಿಕ್ಕಮಗಳೂರು: ಪಡಿತರದಾರರಿಗೆ ವಿತರಿಸುವ ರಾಗಿಯಲ್ಲಿ ಮರಳು, ಕಲ್ಲು ಮತ್ತು ಮಣ್ಣನ್ನು ಮಿಶ್ರಣ ಮಾಡುತ್ತಿದ್ದ ಅಕ್ರಮ ಘಟಕದ ಮೇಲೆ ಆಹಾರ ನಿಗಮದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಿಂಗದಳ್ಳಿ ಸಮೀಪದ ವೇರ್ಹೌಸ್ನಲ್ಲಿ ಈ ಘಟನೆ ನಡೆದಿದೆ.
ಆಹಾರ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಅನುರಾಧ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದಾಗ, ರಾಗಿಗೆ ಮರಳು ಮಿಶ್ರಣ ಮಾಡುತ್ತಿರುವುದು ಪತ್ತೆಯಾಗಿದೆ. ಈ ವೇಳೆ ಮರಳು ಮತ್ತು ಕಲ್ಲು ತುಂಬಿದ್ದ ಲಾರಿಯನ್ನೂ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಬೇರೆ ಜಿಲ್ಲೆಗಳಿಂದ ರಾಗಿಯನ್ನು ಖರೀದಿಸಿ ವೇರ್ಹೌಸ್ನಲ್ಲಿ ಸಂಗ್ರಹಿಸಲಾಗುತ್ತಿತ್ತು. ಬಳಿಕ ಬಿಹಾರ ಮೂಲದ ಕಾರ್ಮಿಕರ ಮೂಲಕ ರಾಗಿಗೆ ಮರಳು ಮಿಶ್ರಣ ಮಾಡಿ, ರಾಜ್ಯದ ವಿವಿಧ ಸೊಸೈಟಿಗಳು ಹಾಗೂ ನ್ಯಾಯಬೆಲೆ ಅಂಗಡಿಗಳಿಗೆ ಸರಬರಾಜು ಮಾಡಲಾಗುತ್ತಿತ್ತು ಎನ್ನಲಾಗಿದೆ.
ಘಟನೆ ಸಂಬಂಧ ವೇರ್ಹೌಸ್ ಮ್ಯಾನೇಜರ್ ಲೋಕೇಶ್ ವಿರುದ್ಧ ಲಿಂಗದಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.









