ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದನ್ನು ಚುನಾವಣಾ ಸಮಯದಲ್ಲಿ ನಿರ್ಧರಿಸಲಾಗುತ್ತದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನರು ಎಲ್ಲೆಡೆ ನಮ್ಮ ಮೇಲೆ ಪ್ರೀತಿ ತೋರಿಸುತ್ತಿದ್ದಾರೆ. ಕುಮಾರಸ್ವಾಮಿ ಅವರ ಅನುಪಸ್ಥಿತಿಯಲ್ಲಿ ನನ್ನನ್ನೇ ಕರೆಯುತ್ತಾರೆ. ಆದ್ದರಿಂದ ರಾಜ್ಯದ ವಿವಿಧ ಭಾಗಗಳಿಗೆ ತೆರಳಬೇಕಾಗುತ್ತದೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಹೇಳಿದರು.
2028ರೊಳಗೆ ನಮ್ಮ ಗುರಿ ಸಾಧಿಸಬೇಕು. ಸದನದಲ್ಲಿ ನಮ್ಮ ಸಂಖ್ಯೆಯನ್ನು ನೋಡಿ ಕೆಲವರು ಅಪಹಾಸ್ಯ ಮಾಡಿದ್ದಾರೆ. ಆದರೆ ನಾವು ಪಕ್ಷವನ್ನು ಮತ್ತಷ್ಟು ಬಲಪಡಿಸಿ ತೋರಿಸುತ್ತೇವೆ ಎಂದು ಹೇಳಿದರು.
ಎನ್ಡಿಎ ಮೈತ್ರಿ ಸರ್ಕಾರ ರಚಿಸುವ ಗುರಿಯಿದೆ ಎಂದು ತಿಳಿಸಿದ ಅವರು, ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದು ಮುಂದಿನ ದಿನಗಳಲ್ಲಿ ತೀರ್ಮಾನವಾಗುತ್ತದೆ. ನಮ್ಮ ಮುಖ್ಯ ಉದ್ದೇಶ ಗುರಿ ಸಾಧನೆ. ಜೆಡಿಎಸ್ ಎಲ್ಲಿದೆ ಎಂಬ ಪ್ರಶ್ನೆ ಕೇಳುವವರಿಗೆ ನಾವು ಕಾರ್ಯದಿಂದ ಉತ್ತರ ಕೊಡುತ್ತೇವೆ ಎಂದು ಹೇಳಿದರು.



