ಬೆಳಗಾವಿ: ನಿರಂತರ ಮಳೆಯಿಂದ ದುರ್ಬಲಗೊಂಡಿದ್ದ ಮನೆಯೊಂದನ್ನು ದುರಸ್ತಿ ಮಾಡುತ್ತಿದ್ದ ವೇಳೆ ಮನೆ ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಮಾದೇವ್ ಕೃಷ್ಣಪ್ಪ ಬಡಿಗೇರ್ (48) ಮತ್ತು ಸೈಯದ್ ಕೆಂಪವಾಡಿ (32) ಎಂದು ಗುರುತಿಸಲಾಗಿದೆ.
ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಮನೆ ಸೋರುತ್ತಿತ್ತು. ಈ ಹಿನ್ನೆಲೆಯಲ್ಲಿ ಕೊಟ್ಟಲಗಿ ಗ್ರಾಮದ ಲಕ್ಷ್ಮೀಬಾಯಿ ನಂದಗೊಂಡ ಅವರ ಮನೆಯ ರಿಪೇರಿ ಕಾರ್ಯವನ್ನು ಕಾರ್ಮಿಕರು ಕೈಗೊಂಡಿದ್ದರು.
ರಿಪೇರಿ ಕೆಲಸ ನಡೆಯುತ್ತಿದ್ದ ವೇಳೆ ಏಕಾಏಕಿ ಮನೆಯ ಒಂದು ಭಾಗ ಕುಸಿದು ಬಿದ್ದಿದೆ. ಪರಿಣಾಮ ಇಬ್ಬರು ಕಾರ್ಮಿಕರು ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ.
ತಕ್ಷಣ ಸ್ಥಳೀಯರು ರಕ್ಷಣಾ ಕಾರ್ಯ ನಡೆಸಿ ಕಾರ್ಮಿಕರನ್ನು ಹೊರತೆಗೆದು ಮಹಾರಾಷ್ಟ್ರದ ಜತ್ತ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಐಗಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.



