ಬೆಂಗಳೂರು: ಶಕ್ತಿ ಯೋಜನೆ ಅಡಿಯಲ್ಲಿ ಮಹಿಳಾ ಪ್ರಯಾಣಿಕರಿಗೆ ಉಚಿತ ಟಿಕೆಟ್ ನೀಡುವ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು ಬಿಎಂಟಿಸಿಗೆ ಹಣ ವಂಚಿಸಿದ ಆರೋಪದಲ್ಲಿ ಐವರು ನೌಕರರನ್ನು ಅಮಾನತು ಮಾಡಲಾಗಿದೆ.
ತನಿಖೆಯ ಪ್ರಕಾರ, ಕೆಲವು ಕಂಡಕ್ಟರ್‌ಗಳು ವೈಯಕ್ತಿಕ ಯುಪಿಐ ಕ್ಯೂಆರ್ ಕೋಡ್‌ಗಳನ್ನು ಬಳಸಿಕೊಂಡು ನಿಗಮಕ್ಕೆ ಬರಬೇಕಿದ್ದ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿರುವುದು ಪತ್ತೆಯಾಗಿದೆ. ಈ ಮೂಲಕ ಲಕ್ಷಾಂತರ ರೂಪಾಯಿ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ.
ಕನ್ನಡ ಓದಲು ಬಾರದ ಪ್ರಯಾಣಿಕರನ್ನು ಗುರಿಯಾಗಿಸಿ ಟಿಕೆಟ್ ವಂಚನೆ ಮಾಡುತ್ತಿದ್ದರೆಂಬ ಆರೋಪವೂ ತನಿಖೆಯಲ್ಲಿ ತಿಳಿದುಬಂದಿದೆ.
ಅಮಾನತುಗೊಂಡ ನೌಕರರು ಮತ್ತು ವಂಚನೆ ಮೊತ್ತ:
- ಸೂರ್ಯನಾರಾಯಣ (ಡಿಪೋ-18): ₹6,117
- ಬೊಮ್ಮಲಿಂಗೇಶ್ ಸಿ (ಡಿಪೋ-18): ₹16,404
- ಬ್ರಿಜೇಶ್ ಬಾಬು (ಡಿಪೋ-51): ₹9,795
- ಮೋಹನ್ (ಡಿಪೋ-18): ₹6,117
- ಎನ್. ಪ್ರಕಾಶ್ (ಡಿಪೋ-6): ₹6,312
ಒಟ್ಟು ₹1,82,568 ರೂಪಾಯಿ ವಂಚನೆ ನಡೆದಿರುವುದು ದೃಢಪಟ್ಟಿದ್ದು, ಈ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
ಈ ಹಿಂದೆ ಕೂಡ ಇದೇ ರೀತಿಯ ಪ್ರಕರಣಗಳಲ್ಲಿ ಕೆಲ ನೌಕರರನ್ನು ಅಮಾನತು ಮಾಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.



