ಬೆಂಗಳೂರು: ಪಬ್ನಲ್ಲಿ ಐಡಿ ಕಾರ್ಡ್ ಕೇಳಿದ್ದಕ್ಕೆ ಪೊಲೀಸ್ ಇನ್ಸ್ಪೆಕ್ಟರ್ ಮೇಲೆಯೇ ಹಲ್ಲೆ ನಡೆಸಿದ ಆರೋಪ ಐಎಎಸ್ ಅಧಿಕಾರಿಯೊಬ್ಬರ ವಿರುದ್ಧ ಕೇಳಿಬಂದಿದೆ.
ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಆಂಧ್ರಪ್ರದೇಶ ಕೇಡರ್ನ ಐಎಎಸ್ ಅಧಿಕಾರಿ ವಿಕಾಸ್ ಮರ್ಮಠ್ ಸೇರಿದಂತೆ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮಧ್ಯರಾತ್ರಿ ಪಬ್ಗೆ ಬಂದಿದ್ದ ಅಧಿಕಾರಿ:
ಆಂಧ್ರಪ್ರದೇಶದ ಕುಪ್ಪಂನಲ್ಲಿ ವಿಶೇಷ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ವಿಕಾಸ್ ಮರ್ಮಠ್ ಅವರು ತಮ್ಮ ಮೂವರು ಸ್ನೇಹಿತರೊಂದಿಗೆ ಬೆಂಗಳೂರಿನ ‘ಕಾವೂರ್’ ಪಬ್ಗೆ ಬಂದಿದ್ದರು ಎನ್ನಲಾಗಿದೆ. ರಾತ್ರಿ ಸುಮಾರು 1.30ರ ವೇಳೆಗೆ ಸಿಸಿಬಿ ಅಧಿಕಾರಿಗಳು ಪಬ್ನಲ್ಲಿ ಪರಿಶೀಲನೆ ನಡೆಸಲು ತೆರಳಿದ್ದರು.
ಈ ವೇಳೆ ಅಧಿಕಾರಿಗಳು ಗುರುತಿನ ಚೀಟಿ ಕೇಳಿದ್ದಾರೆ. ಇದರಿಂದ ಅಸಮಾಧಾನಗೊಂಡ ಐಎಎಸ್ ಅಧಿಕಾರಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಐಡಿ ಕೇಳಿದ್ದಕ್ಕೆ ಕಪಾಳಕ್ಕೆ ಹೊಡೆದರಾ?
ಪರಿಶೀಲನೆಯ ವೇಳೆ ನಡೆದ ವಾಗ್ವಾದ ವಿಕೋಪಕ್ಕೆ ತಿರುಗಿದ್ದು, ಪೊಲೀಸ್ ಇನ್ಸ್ಪೆಕ್ಟರ್ ಮೇಲೆ ವಿಕಾಸ್ ಮರ್ಮಠ್ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. “ನಾನು ಐಎಎಸ್ ಅಧಿಕಾರಿ, ನಿಮ್ಮಿಂದ ಏನು ಮಾಡಲು ಸಾಧ್ಯವೋ ನೋಡಿಕೊಳ್ಳಿ” ಎಂದು ಬೆದರಿಕೆ ಹಾಕಿದ್ದಾರೆ ಎಂಬುದಾಗಿಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ವರದಿಯಾಗಿದೆ.
ನಾಲ್ವರ ವಿರುದ್ಧ ಪ್ರಕರಣ ದಾಖಲು:
ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸಿ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ದೂರಿನ ಆಧಾರದಲ್ಲಿ ಐಎಎಸ್ ಅಧಿಕಾರಿ ವಿಕಾಸ್ ಮರ್ಮಠ್ ಮತ್ತು ಅವರ ಸ್ನೇಹಿತರಾದ ನಿತೇಶ್, ಅಭಯ್ ಉದಯ್ ಸಿಂಗ್ ಹಾಗೂ ರೋಷನ್ ವಿರುದ್ಧ ಪ್ರಕರಣ ದಾಖಲಾಗಿರುವುದಾಗಿ ವರದಿಯಾಗಿದೆ.
ಪ್ರಕರಣದ ಕುರಿತು ಪೊಲೀಸರು ಮುಂದಿನ ತನಿಖೆ ಹಾಗೂ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ ಎನ್ನಲಾಗಿದೆ.



