ಊಟದ ನಂತರ ತಮ್ಮ ತಟ್ಟೆಯನ್ನು ನಾವೇ ತೆಗೆದುಕೊಳ್ಳುವ ಸಂಪ್ರದಾಯದ ಮಹತ್ವದ ಬಗ್ಗೆ ಧಾರ್ಮಿಕ ಹಾಗೂ ಶಾಸ್ತ್ರದ ದೃಷ್ಟಿಯಿಂದ ಮಹತ್ವದ ಮಾಹಿತಿಯೊಂದು ಲಭ್ಯವಾಗಿದೆ.
ಆಹಾರ ಸೇವನೆಯನ್ನು ‘ಅನ್ನಯಜ್ಞ’ ಎಂದು ಪರಿಗಣಿಸಲಾಗುತ್ತದೆ. ಈ ಯಜ್ಞದ ಆರಂಭದಿಂದ ಅಂತ್ಯವರೆಗೂ ವಿನಯ, ವಿಧೇಯತೆ, ಭಕ್ತಿ ಮತ್ತು ಕೃತಜ್ಞತಾ ಭಾವ ಹೊಂದಿರುವುದು ಅಗತ್ಯವೆಂದು ತಿಳಿಸಲಾಗಿದೆ. ಮನೆಯಲ್ಲಿ ಯಾರು ಆಹಾರ ತಯಾರಿಸಿದರೂ, ಅನ್ನವನ್ನು ಪರಬ್ರಹ್ಮ ಸ್ವರೂಪವೆಂದು ಪರಿಗಣಿಸಲಾಗುತ್ತದೆ.
ಊಟದ ನಂತರ ತಮ್ಮ ತಟ್ಟೆಯನ್ನು ನಾವೇ ತೆಗೆದುಕೊಳ್ಳುವುದರಿಂದ ಅನ್ನಪೂರ್ಣೇಶ್ವರಿ ಹಾಗೂ ಅನ್ನದಾತರ ಮೇಲಿನ ಕೃತಜ್ಞತೆ ವ್ಯಕ್ತವಾಗುತ್ತದೆ. ಇದರಿಂದ ಜೀವನದಲ್ಲಿ ಆಹಾರದ ಕೊರತೆ ಎದುರಾಗುವುದಿಲ್ಲ ಎಂಬ ನಂಬಿಕೆಯೂ ಇದೆ.
ಊಟ ಮಾಡಿದ ಬಳಿಕ ಆಹಾರ ‘ಎಂಜಲು’ ಆಗುತ್ತದೆ. ಅದನ್ನು ಬೇರೆಯವರು ತೆಗೆದುಕೊಂಡು ಹೋದರೆ ಅದೃಷ್ಟ ಕುಗ್ಗುತ್ತದೆ ಎಂಬ ನಂಬಿಕೆ ಇದೆ. ಆದರೆ ಅತಿಥಿಗಳ ವಿಚಾರದಲ್ಲಿ ಇದು ಅನ್ವಯಿಸುವುದಿಲ್ಲ. ‘ಅತಿಥಿ ದೇವೋಭವ’ ಎಂಬ ತತ್ವದಂತೆ, ಅತಿಥಿಗಳ ತಟ್ಟೆಯನ್ನು ನಾವು ಸ್ವತಃ ತೆಗೆದುಕೊಳ್ಳುವುದು ಕರ್ತವ್ಯವಾಗಿದೆ.
ತಟ್ಟೆಯಲ್ಲಿ ಯಾವುದೇ ಆಹಾರ ಉಳಿಯದಂತೆ ಶುದ್ಧವಾಗಿ ಮಾಡುವುದು ಉತ್ತಮ. ಉಳಿದ ಆಹಾರವನ್ನು ತ್ಯಜಿಸಿ, ತಟ್ಟೆಯನ್ನು ತೊಳೆದು ಅಥವಾ ಸ್ವಚ್ಛ ಸ್ಥಳದಲ್ಲಿ ಇಡುವ ಅಭ್ಯಾಸದಿಂದ ಶಿಸ್ತು, ನಮ್ರತೆ ಮತ್ತು ಕೃತಜ್ಞತೆ ಬೆಳೆಯುತ್ತದೆ. ಇದರಿಂದ ಕುಟುಂಬದ ಬಾಂಧವ್ಯಗಳು ಬಲವಾಗುತ್ತವೆ.
ಶಾಸ್ತ್ರದ ಪ್ರಕಾರ, ಈ ಪದ್ಧತಿಯನ್ನು ಪಾಲಿಸುವುದರಿಂದ ಆರ್ಥಿಕ ಸಮೃದ್ಧಿ ಹೆಚ್ಚುತ್ತದೆ, ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ ಮತ್ತು ಮನೆಯಲ್ಲಿನ ಶಾಂತಿ, ಸೌಹಾರ್ದತೆ ವೃದ್ಧಿಸುತ್ತದೆ ಎಂದು ಹೇಳಲಾಗಿದೆ.
ತಟ್ಟೆಯಲ್ಲಿ ಕೈ ತೊಳೆಯುವುದನ್ನು ತಪ್ಪಿಸಿ, ಬೇರೆಡೆ ಕೈ ತೊಳೆಯುವುದು ಉತ್ತಮ. ಊಟದ ನಂತರ ತಟ್ಟೆಯನ್ನು ಹೆಚ್ಚು ಹೊತ್ತು ಹಾಗೆಯೇ ಬಿಡದೆ ತಕ್ಷಣವೇ ಶುದ್ಧಿ ಮಾಡಬೇಕು. ವಿಶೇಷವಾಗಿ ರಾತ್ರಿಯಿಡೀ ತಟ್ಟೆಯನ್ನು ಸಿಂಕ್‌ನಲ್ಲಿ ಬಿಡಬಾರದು ಎಂದು ಸೂಚಿಸಲಾಗಿದೆ.
ಆದರೆ ಈ ನಿಯಮಗಳು ಮನೆಗಳಿಗೆ ಮಾತ್ರ ಅನ್ವಯಿಸುವುದಾಗಿದ್ದು, ಮದುವೆ ಸಮಾರಂಭಗಳು ಅಥವಾ ಹೋಟೆಲ್‌ಗಳಲ್ಲಿ ಅತಿಥಿಗಳಾಗಿ ಹೋದಾಗ ಈ ಪದ್ಧತಿಯನ್ನು ಪಾಲಿಸುವ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ.



