ಬೆಂಗಳೂರು: ಕೆಆರ್ ಪುರದ ಟಿಸಿ ಪಾಳ್ಯ ಸಿಗ್ನಲ್ ಬಳಿ ಇಂದು ಬೆಳಗ್ಗೆ ಬೃಹತ್ ಕ್ಯಾಂಟರ್ ಮತ್ತು ಮೊಟ್ಟೆ ತುಂಬಿದ್ದ ಮಿನಿ ಟೆಂಪೋ ನಡುವೆ ಅಪಘಾತ ಸಂಭವಿಸಿದೆ.
ಈ ಘಟನೆಯಲ್ಲಿ ಸಾವಿರಾರು ಮೊಟ್ಟೆಗಳು ರಸ್ತೆ ಮೇಲೆ ಬಿದ್ದು ಸಂಪೂರ್ಣವಾಗಿ ನಾಶವಾಗಿವೆ.
ಮಾರುಕಟ್ಟೆಗೆ ಮೊಟ್ಟೆ ಸಾಗಿಸುತ್ತಿದ್ದ ಮಿನಿ ಟೆಂಪೋಗೆ ಹಿಂದಿನಿಂದ ಬಂದ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಟೆಂಪೋ ಪಲ್ಟಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವಾಹನದಲ್ಲಿ ತುಂಬಿದ್ದ ಮೊಟ್ಟೆಗಳು ರಸ್ತೆ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದು ಹಾನಿಗೊಂಡಿವೆ.
ಘಟನೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ. ಸ್ಥಳಕ್ಕೆ ಕೆಆರ್ ಪುರ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಅಪಘಾತ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.



