ಬೆಂಗಳೂರು: ಶಾಸಕರು ಸಚಿವ ಸ್ಥಾನ ಕೇಳುವುದು ತಪ್ಪಲ್ಲ. ಸಂಪುಟ ಪುನರ್‌ರಚನೆ ಆಗಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಶಾಸಕರು ಸಚಿವ ಸ್ಥಾನಕ್ಕಾಗಿ ಪ್ರಯತ್ನಿಸುವುದು ಸಹಜ. ಪ್ರತಿಯೊಬ್ಬರಿಗೂ ಮಂತ್ರಿಯಾಗುವ ಆಸೆ ಇರುತ್ತದೆ ಎಂದು ಹೇಳಿದರು. ಹಿಂದೆ ತಾವು ಸಚಿವರಾಗಿದ್ದಾಗಲೂ ಸಂಪುಟ ಪುನರ್‌ರಚನೆ ನಡೆದಿತ್ತು ಎಂದು ಉಲ್ಲೇಖಿಸಿದರು.
ಬೇರೆಯವರಿಗೂ ಸಚಿವ ಸ್ಥಾನ ಸಿಗಬೇಕು ಎಂಬುದು ಸಹಜ. ಆದರೆ ಯಾರು ಸಚಿವರಾಗಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಒಟ್ಟು ಸಚಿವರ ಪಟ್ಟಿಯನ್ನೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.
ಶಾಸಕರು ದೆಹಲಿಗೆ ತೆರಳಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈ ಕುರಿತು ಉಪಮುಖ್ಯಮಂತ್ರಿಗಳ ಹೇಳಿಕೆಗೆ ತಾವು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು. ಶಾಸಕರು ತಮ್ಮ ಮಟ್ಟಿಗೆ ಪ್ರಯತ್ನಿಸುವುದು ತಪ್ಪಲ್ಲ ಎಂದು ಪುನರುಚ್ಚರಿಸಿದರು.



