ಕೊಪ್ಪಳ: ತೀವ್ರ ಬಿಸಿಲಿನ ಹಿನ್ನೆಲೆ ಅಂಜನಾದ್ರಿ ಬೆಟ್ಟ ಏರುವ ಭಕ್ತರ ಸುರಕ್ಷತೆಗಾಗಿ ಕೊಪ್ಪಳ ಜಿಲ್ಲಾಡಳಿತ ಮಹತ್ವದ ಆದೇಶ ಹೊರಡಿಸಿದೆ. ಇನ್ಮುಂದೆ ಮಧ್ಯಾಹ್ನ ವೇಳೆಯಲ್ಲಿ ಬೆಟ್ಟ ಏರಲು ನಿರ್ಬಂಧ ಹೇರಲಾಗಿದ್ದು, ನಿಗದಿತ ಸಮಯದಲ್ಲಷ್ಟೇ ಭಕ್ತರಿಗೆ ಪ್ರವೇಶ ಕಲ್ಪಿಸಲಾಗಿದೆ.
ಪ್ರತಿದಿನ ಬೆಳಗ್ಗೆ 11 ಗಂಟೆಯೊಳಗೆ ಹಾಗೂ ಸಂಜೆ 4 ಗಂಟೆಯ ನಂತರ ಮಾತ್ರ ಅಂಜನಾದ್ರಿ ಬೆಟ್ಟ ಏರಲು ಅವಕಾಶ ನೀಡಲಾಗಿದೆ. ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ಬೆಟ್ಟ ಏರಲು ಸಂಪೂರ್ಣ ನಿಷೇಧಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಹನುಮಂತನ ಜನ್ಮಸ್ಥಳವೆಂದು ಪ್ರಸಿದ್ಧಿಯಾದ ಗಂಗಾವತಿ ತಾಲೂಕಿನ ಹನುಮನಹಳ್ಳಿಯ ಅಂಜನಾದ್ರಿ ಪರ್ವತಕ್ಕೆ ರಾಜ್ಯದ ವಿವಿಧ ಭಾಗಗಳಲ್ಲದೆ ಹೊರರಾಜ್ಯಗಳಿಂದಲೂ ಸಾವಿರಾರು ಭಕ್ತರು ಆಗಮಿಸುತ್ತಾರೆ. ಆದರೆ 575 ಮೆಟ್ಟಿಲುಗಳನ್ನು ಹತ್ತಿ ದರ್ಶನ ಪಡೆಯುವ ವೇಳೆ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಅನೇಕರು ಅಸ್ವಸ್ಥಗೊಳ್ಳುತ್ತಿರುವುದು ಗಮನಕ್ಕೆ ಬಂದಿದೆ.
ನಿರ್ಜಲೀಕರಣ, ಸುಸ್ತು ಹಾಗೂ ಉಸಿರಾಟದ ತೊಂದರೆಯಿಂದ ಭಕ್ತರು ಮೆಟ್ಟಿಲುಗಳ ಮೇಲೆಯೇ ಕುಸಿದು ಬೀಳುತ್ತಿರುವ ಘಟನೆಗಳು ವರದಿಯಾಗಿವೆ. ಕೆಲವರು ಹೃದಯಾಘಾತಕ್ಕೀಡಾದ ಪ್ರಕರಣಗಳೂ ಕಂಡುಬಂದಿವೆ. ಈ ಹಿನ್ನೆಲೆಯಲ್ಲಿ ಭಕ್ತರ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ಸಮಯ ಮಿತಿಯ ಆದೇಶ ಜಾರಿ ಮಾಡಿದ್ದಾರೆ.
ಜಿಲ್ಲಾಡಳಿತದ ಈ ಕ್ರಮವನ್ನು ಭಕ್ತರು ಸ್ವಾಗತಿಸಿದ್ದು, ಬೆಟ್ಟದ ಮೇಲೆ ತುರ್ತು ಚಿಕಿತ್ಸೆಗಾಗಿ ಆರೋಗ್ಯ ಸಿಬ್ಬಂದಿ ನಿಯೋಜಿಸುವಂತೆ ಮನವಿ ಮಾಡಿದ್ದಾರೆ. ಬೇಸಿಗೆಯ ತೀವ್ರತೆ ಕಡಿಮೆಯಾಗುವವರೆಗೆ ಭಕ್ತರು ನಿಗದಿತ ಸಮಯವನ್ನು ಪಾಲಿಸುವುದು ಅನಿವಾರ್ಯವಾಗಿದೆ.



