ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕಂಚಿನಾಬಾಗಿಲು ಬಳಿಯ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಪೆಟ್ರೋಲ್ ಸಾಗಿಸುತ್ತಿದ್ದ ಟ್ಯಾಂಕರ್‌ಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡು ಭಾರೀ ಅವಘಡ ಸಂಭವಿಸಿದೆ.
ಮಂಗಳೂರಿನಿಂದ ಹುಬ್ಬಳ್ಳಿಯತ್ತ ತೆರಳುತ್ತಿದ್ದ ಟ್ಯಾಂಕರ್‌ನಲ್ಲಿ ಪೆಟ್ರೋಲ್ ತುಂಬಿದ್ದರಿಂದ ಬೆಂಕಿ ಕಾಣಿಸಿಕೊಂಡ ತಕ್ಷಣವೇ ವಾಹನ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಕ್ಷಣಾರ್ಧದಲ್ಲೇ ಜ್ವಾಲೆಗಳು ಭಾರಿಯಾಗಿ ವ್ಯಾಪಿಸಿದ್ದು, ಪರಿಸ್ಥಿತಿ ಆತಂಕಕಾರಿ ರೂಪ ಪಡೆದಿದೆ.
ಇದೇ ವೇಳೆ ಬೆಂಕಿಯ ತೀವ್ರತೆ ರಸ್ತೆ ಪಕ್ಕದ ಅರಣ್ಯ ಪ್ರದೇಶಕ್ಕೂ ಹರಡಿದ್ದು, ಪರಿಸರ ಹಾನಿಯ ಭೀತಿ ಉಂಟಾಗಿದೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಡುತ್ತಿದ್ದಾರೆ.
ಘಟನೆಯಿಂದಾಗಿ ಕೆಲಕಾಲ ಸಂಚಾರಕ್ಕೂ ವ್ಯತ್ಯಯ ಉಂಟಾಗಿದ್ದು, ಹೆಚ್ಚಿನ ಅನಾಹುತ ತಪ್ಪಿಸಲು ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ.



