ನವದೆಹಲಿ: ರಾಜ್ಯಸಭಾ ಸದಸ್ಯ ಹರಿವಂಶ್ ನಾರಾಯಣ್ ಸಿಂಗ್ ಅವರು ರಾಜ್ಯಸಭಾ ಉಪಾಧ್ಯಕ್ಷರಾಗಿ ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವಿರೋಧ ಪಕ್ಷಗಳು ಅಭ್ಯರ್ಥಿಯನ್ನು ಕಣಕ್ಕಿಳಿಸದ ಹಿನ್ನೆಲೆಯಲ್ಲಿ ಚುನಾವಣೆಯು ಅವಿರೋಧವಾಗಿ ನಡೆಯಿತು.
ಏಪ್ರಿಲ್ 9ರಂದು ಅವರ ಹಿಂದಿನ ಅವಧಿ ಮುಗಿದ ನಂತರ ಉಪಾಧ್ಯಕ್ಷ ಹುದ್ದೆ ಖಾಲಿಯಾಗಿತ್ತು. ನಂತರ ಸಿ.ಪಿ. ರಾಧಾಕೃಷ್ಣನ್ ಅವರು ಚುನಾವಣೆಯ ದಿನಾಂಕವನ್ನು ನಿಗದಿಪಡಿಸಿದ್ದರು.
ರಾಜ್ಯಸಭೆ ಸದನದ ನಾಯಕ ಜೆ.ಪಿ. ನಡ್ಡಾ ಮಂಡಿಸಿದ ಪ್ರಸ್ತಾವನೆಯನ್ನು ಸದನವು ಧ್ವನಿಮತದ ಮೂಲಕ ಅಂಗೀಕರಿಸಿತು. ಬಳಿಕ ಸಭಾಪತಿಗಳು ಹರಿವಂಶ್ ಅವರ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹರಿವಂಶ್ ಅವರ ಪುನರಾಯ್ಕೆಗೆ ಅಭಿನಂದನೆ ಸಲ್ಲಿಸಿ, ಇದು ಸದನವು ಅವರ ಮೇಲಿಟ್ಟಿರುವ ನಂಬಿಕೆಯನ್ನು ತೋರಿಸುತ್ತದೆ ಎಂದು ಹೇಳಿದರು. ಹರಿವಂಶ್ ನಾರಾಯಣ್ ಸಿಂಗ್ ಈಗಾಗಲೇ ಎರಡು ಬಾರಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಇದು ಅವರ ಮೂರನೇ ಅವಧಿಯಾಗಲಿದೆ.



