ಪುಣೆ: ಮಹಾರಾಷ್ಟ್ರದ ಪುಣೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರತೀಯ ವಾಯುಪಡೆಯ ಯುದ್ಧ ವಿಮಾನ ತಾಂತ್ರಿಕ ದೋಷದಿಂದ ರನ್‌ವೇ ಮೇಲೆ ಸ್ಥಗಿತಗೊಂಡ ಪರಿಣಾಮ ದೇಶೀಯ ವಿಮಾನ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಯಿತು.
ಶುಕ್ರವಾರ ರಾತ್ರಿ ಸುಮಾರು 10:25ರ ವೇಳೆಗೆ ವಾಡಿಕೆಯ ತರಬೇತಿ ಹಾರಾಟ ಮುಗಿಸಿ ಭೂಸ್ಪರ್ಶಿಸುವಾಗ ಯುದ್ಧ ವಿಮಾನದ ಅಡಿಭಾಗದ ಚಕ್ರ ವ್ಯವಸ್ಥೆಯಲ್ಲಿ ತಾಂತ್ರಿಕ ವೈಫಲ್ಯ ಉಂಟಾಗಿ ವಿಮಾನ ರನ್‌ವೇ ಮೇಲೆಯೇ ನಿಂತುಬಿಟ್ಟಿತು. ಆದರೆ, ವಿಮಾನದಲ್ಲಿದ್ದ ಪೈಲಟ್‌ಗಳು ಸುರಕ್ಷಿತವಾಗಿದ್ದು ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ಭಾರತೀಯ ವಾಯುಪಡೆ ಸ್ಪಷ್ಟಪಡಿಸಿದೆ.
ಈ ಘಟನೆ ಹಿನ್ನೆಲೆ ಸುರಕ್ಷತಾ ಕ್ರಮವಾಗಿ ಎಲ್ಲಾ ನಾಗರಿಕ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ರನ್‌ವೇ ಕ್ಲಿಯರಿಂಗ್ ಕಾರ್ಯಾಚರಣೆ ಪೂರ್ಣಗೊಳ್ಳಲು ಹಲವು ಗಂಟೆಗಳು ಹಿಡಿದಿದ್ದು, ನಂತರ ಅಗತ್ಯ ತಾಂತ್ರಿಕ ಪರಿಶೀಲನೆಗಳ ಬಳಿಕ ಸೇವೆಗಳು ಪುನರಾರಂಭಗೊಂಡವು.
ಈ ವ್ಯತ್ಯಯದಿಂದ ಅನೇಕ ವಿಮಾನಗಳ ಆಗಮನ ಹಾಗೂ ನಿರ್ಗಮನಗಳು ರದ್ದುಪಡಿಸಲ್ಪಟ್ಟಿದ್ದು, ಪ್ರಯಾಣಿಕರು ಭಾರೀ ಸಂಕಷ್ಟಕ್ಕೆ ಸಿಲುಕಿದರು.



