ಬಳ್ಳಾರಿ: ಗೃಹಲಕ್ಷ್ಮಿ ಯೋಜನೆಯ ಹಣವನ್ನು ಸಂಗ್ರಹಿಸಿ ಮಹಿಳೆಯೊಬ್ಬರು ಸಣ್ಣ ಮಟ್ಟದಲ್ಲಿ ಐಸ್‌ಕ್ರೀಂ ಅಂಗಡಿ ಆರಂಭಿಸಿ ಸ್ವಾವಲಂಬಿ ಬದುಕು ಕಟ್ಟಿಕೊಂಡ ಘಟನೆ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲ್ಲೂಕಿನ ಹರಾಳು ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಹರಾಳು ಗ್ರಾಮದ ಎನ್. ವಿಶಾಲಾಕ್ಷಿ ಅವರು ಈ ಉದ್ಯಮ ಆರಂಭಿಸಿ ಗಮನ ಸೆಳೆದಿದ್ದಾರೆ. ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ಅವರು ಮೊದಲು ಕೂಲಿ ಕೆಲಸ ಮಾಡುತ್ತಿದ್ದರು. ನಂತರ ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆಯಡಿ ದೊರೆಯುವ ₹2,000 ಹಣವನ್ನು ಉಳಿಸಿ ಐಸ್‌ಕ್ರೀಂ ಅಂಗಡಿ ಆರಂಭಿಸಿದ್ದಾರೆ.
ಕೊಟ್ಟೂರಿನ ವಿತರಕರಿಂದ ಚಾಕೋಬಾರ್, ಐಸ್ ಕ್ಯಾಂಡಿ, ಕುಲ್ಫಿ, ಕೋನ್ ಐಸ್, ಕಪ್ ಐಸ್ ಸೇರಿದಂತೆ ವಿವಿಧ ಐಸ್‌ಕ್ರೀಂ ಉತ್ಪನ್ನಗಳನ್ನು ಪಡೆದು ಮಾರಾಟ ಮಾಡುತ್ತಿದ್ದಾರೆ. ಅಂಗಡಿ ಆರಂಭವಾದ ಕೆಲವೇ ದಿನಗಳಲ್ಲಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.
ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜನರು ತಂಪುಪಾನೀಯಗಳು ಮತ್ತು ಐಸ್‌ಕ್ರೀಂ ಕಡೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇದರಿಂದ ವಿಶಾಲಾಕ್ಷಿ ಅವರ ವ್ಯಾಪಾರಕ್ಕೂ ಉತ್ತೇಜನ ಸಿಕ್ಕಿದೆ.
ಇದುವರೆಗೂ ಪಡೆದ ಹಣವನ್ನು ಬ್ಯಾಂಕ್‌ನಲ್ಲಿ ಉಳಿಸಿಕೊಂಡಿದ್ದ ಅವರು, ಪತಿ ಎನ್. ಬಸವರಾಜ ಅವರ ಸಹಕಾರದಿಂದ ಈ ಉದ್ಯಮ ಆರಂಭಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆ ನಮ್ಮ ಜೀವನದಲ್ಲಿ ದೊಡ್ಡ ಬದಲಾವಣೆ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.



