ಬೆಂಗಳೂರು: ನಗರದ ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ 56 ವರ್ಷದ ವ್ಯಕ್ತಿಯೊಬ್ಬರು ತಮ್ಮದೇ ಕಾರಿನೊಳಗೆ ಮೃತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಕುತೂಹಲ ಹುಟ್ಟಿಸಿದೆ. ಬಸಾಪುರ ನಿವಾಸಿ ನಾರಾಯಣಪ್ಪ ಮೃತ ವ್ಯಕ್ತಿಯಾಗಿದ್ದು, ಕಾರಿನ ಚಾಲಕನ ಪಕ್ಕದ ಸೀಟ್ನಲ್ಲಿ ಅಚಲವಾಗಿ ಕುಳಿತಿರುವುದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲಿಸಿದಾಗ, ನಾರಾಯಣಪ್ಪ ಅದಾಗಲೇ ಮೃತಪಟ್ಟಿರುವುದು ದೃಢಪಟ್ಟಿದೆ. ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಂತೆ, ಅವರು ಸ್ನೇಹಿತರಾದ ಮಂಜುನಾಥ ರೆಡ್ಡಿ ಮತ್ತು ಶಿವು ಜೊತೆ ಎಲೆಕ್ಟ್ರಾನಿಕ್ಸ್ ಸಿಟಿಯ ಬಾರ್ಗೆ ತೆರಳಿ ಮದ್ಯಪಾನ ಮಾಡಿದ್ದರು. ತೀವ್ರ ಮದ್ಯಪಾನದ ಪರಿಣಾಮವಾಗಿ ನಿಂತುಕೊಳ್ಳಲೂ ಕಷ್ಟವಾಗಿದ್ದ ಅವರನ್ನು ಸ್ನೇಹಿತರು ಹಿಡಿದು ಕಾರಿನವರೆಗೆ ಕರೆತಂದಿದ್ದಾರೆ.
ನಂತರ ನಾರಾಯಣಪ್ಪ ಕಾರಿನ ಪ್ಯಾಸೆಂಜರ್ ಸೀಟ್ನಲ್ಲಿ ಕುಳಿತಿದ್ದು, ಅವರ ಕಾರನ್ನು ಮಂಜುನಾಥ ರೆಡ್ಡಿ ಚಾಲನೆ ಮಾಡಿದ್ದಾರೆ. ಶಿವು ಬಾರ್ನಿಂದ ಹೊರಬಂದ ಬಳಿಕ ಬೇರೆ ದಾರಿಯಲ್ಲಿ ತೆರಳಿದ್ದಾನೆ. ಈ ಎಲ್ಲಾ ಘಟನೆಗಳು ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕೆಲ ಕಿಲೋಮೀಟರ್ ಪ್ರಯಾಣಿಸಿದ ಬಳಿಕ ಮಂಜುನಾಥ ರೆಡ್ಡಿಗೆ ಕಾರು ಚಲಾಯಿಸಲು ಅಸಾಧ್ಯವಾದ ಕಾರಣ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಮನೆಗೆ ತೆರಳಿದ್ದಾರೆ. ಆದರೆ ಮರುದಿನ ಅದೇ ಸ್ಥಳದಲ್ಲಿ ಕಾರಿನೊಳಗೆ ನಾರಾಯಣಪ್ಪ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಈ ಕುರಿತು ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿದ್ದು, ದೇಹದಲ್ಲಿ ಯಾವುದೇ ಗಾಯಗಳಿಲ್ಲದೆ ಅನುಮಾನಾಸ್ಪದ ಅಂಶ ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ. ಸಾವಿನ ನಿಖರ ಕಾರಣ ಮರಣೋತ್ತರ ಪರೀಕ್ಷೆಯ ವರದಿ ಬಳಿಕವೇ ತಿಳಿಯಲಿದೆ.



