ಕಲಬುರಗಿ: ಅಪ್ರಾಪ್ತೆಯನ್ನು ಪ್ರೀತಿಸಿ ಮದುವೆಯಾದ ಪ್ರಕರಣದಲ್ಲಿ ಪೋಕ್ಸೋ ಕೇಸ್ ಎದುರಿಸುತ್ತಿದ್ದ ಯುವಕನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಕಾಳಗಿ ತಾಲೂಕಿನಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ. ರೇವಣಸಿದ್ದಪ್ಪ ತಳಕೇರಿ (26) ಎಂಬಾತ ಊರಾಚೆಯ ಹುಣಸೆ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ಆತ್ಮಹತ್ಯೆಯೋ ಅಥವಾ ಸಂಚುನೀಡಿದ ಕೊಲೆಯೋ ಎಂಬ ಪ್ರಶ್ನೆಗಳು ಎದ್ದಿವೆ.
ಟಂಟಂ ಆಟೋ ಚಾಲಕರಾಗಿದ್ದ ರೇವಣಸಿದ್ದಪ್ಪ ತನ್ನ ವಾಹನದಲ್ಲಿ ಓಡಾಡುತ್ತಿದ್ದ ಅಪ್ರಾಪ್ತ ಬಾಲಕಿಯೊಂದಿಗೆ ಪ್ರೇಮ ಸಂಬಂಧ ಬೆಳೆಸಿಕೊಂಡಿದ್ದ. ವಿಷಯ ಕುಟುಂಬಗಳಿಗೆ ತಿಳಿದ ಬಳಿಕ ಪೋಷಕರು ಅವನನ್ನು ಹೈದರಾಬಾದ್‌ಗೆ ಕಳುಹಿಸಿದ್ದರೂ, ಪ್ರೇಮವನ್ನು ಮುಂದುವರಿಸಿದ ಆತ ಯುವತಿಯನ್ನು ಅಲ್ಲಿಗೆ ಕರೆಸಿಕೊಂಡು ಮದುವೆಯಾದನು. ಈ ಘಟನೆ ಬಾಲಕಿಯ ಕುಟುಂಬಕ್ಕೆ ತಿಳಿದ ತಕ್ಷಣವೇ ದೂರು ದಾಖಲಾಗಿ, ಪೋಕ್ಸೋ ಕಾಯ್ದೆಯಡಿ ಪೊಲೀಸರು ಅವನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.
ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ, ಜೀವನದ ಒತ್ತಡಗಳು ಹೆಚ್ಚಾಗಿದ್ದವು ಎಂದು ತಿಳಿದುಬಂದಿದೆ. ಪ್ರೇಮಿಸಿದ ಯುವತಿಯನ್ನು ಕಳೆದುಕೊಳ್ಳುವುದು, ಪ್ರಕರಣದ ಒತ್ತಡ, ಸಮಾಜದ ಮಾತುಗಳು ಎಲ್ಲಾ ಸೇರಿ ಅವನ ಮನಸ್ಥಿತಿಯನ್ನು ಕುಗ್ಗಿಸಿವೆ ಎನ್ನಲಾಗುತ್ತಿದೆ. ಯುವತಿಯ ಪೋಷಕರು ತಾಳಿ ಕಿತ್ತು ಅವಮಾನಿಸಿದ ಘಟನೆ ಕೂಡ ಅವನ ಮೇಲೆ ಆಳವಾದ ಪರಿಣಾಮ ಬೀರಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸಾವಿಗೂ ಮೊದಲೇ ಇನ್ಸ್ಟಾಗ್ರಾಂನಲ್ಲಿ ತನ್ನ ಫೋಟೋಗೆ ‘RIP’ ಎಂದು ಪೋಸ್ಟ್ ಮಾಡಿರುವುದು ಪ್ರಕರಣಕ್ಕೆ ಮತ್ತಷ್ಟು ತಿರುವು ನೀಡಿದೆ. ಸದ್ಯ ರಟಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಯೋ ಅಥವಾ ಕೊಲೆ ಮಾಡಿ ಶವವನ್ನು ನೇಣು ಹಾಕಿರುವುದೋ ಎಂಬುದರ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.



