ಕಲಬುರಗಿ: ಪೋಕ್ಸೋ ಸಂತ್ರಸ್ತೆಯ ಕುಟುಂಬಕ್ಕೆ ನೆರವು ನೀಡಬೇಕಿದ್ದ ಪೊಲೀಸ್ ಸಿಬ್ಬಂದಿಯೇ ಲಂಚಕ್ಕಾಗಿ ಕಿರುಕುಳ ನೀಡಿದ ಘಟನೆ ಕಲಬುರಗಿಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ಎಎಸ್ಐ ಶಿವಶರಣಪ್ಪ ಮತ್ತು ಮಹಿಳಾ ಕಾನ್ಸ್ಟೆಬಲ್ ಜ್ಯೋತಿಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಸಂತ್ರಸ್ತೆಯ ತಾಯಿಗೆ ಕಾನೂನು ನೆರವು ಮತ್ತು ನ್ಯಾಯಾಲಯದ ಪ್ರಕ್ರಿಯೆಯಲ್ಲಿ ಸಹಾಯ ಮಾಡುವುದಾಗಿ ಹೇಳಿ 10 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಇವರ ಮೇಲಿದೆ. ಜೊತೆಗೆ ಸರ್ಕಾರಿ ಅಭಿಯೋಜಕರ ಶುಲ್ಕ ಎಂದು ಹೇಳಿ ಈಗಾಗಲೇ 1 ಸಾವಿರ ರೂಪಾಯಿ ಪಡೆದಿರುವುದೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ದೂರಿನ ಮೇರೆಗೆ ಬಲೆ ಬೀಸಿದ ಲೋಕಾಯುಕ್ತ ಅಧಿಕಾರಿಗಳು, ಮಹಿಳಾ ಕಾನ್ಸ್ಟೆಬಲ್ ಜ್ಯೋತಿ ಹಣ ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆಸಿ ಬಂಧಿಸಿದರು. ಮತ್ತೊಂದೆಡೆ ಎಎಸ್ಐ ಶಿವಶರಣಪ್ಪ ತಪ್ಪಿಸಿಕೊಳ್ಳಲು ಯತ್ನಿಸಿದರೂ, ಅಧಿಕಾರಿಗಳ ತಂಡ ಆತನನ್ನು ಬೆನ್ನಟ್ಟಿ ಹಿಡಿದಿದೆ.
ಸಾಮಾನ್ಯ ಭ್ರಷ್ಟಾಚಾರದ ಪ್ರಕರಣಗಳಿಗಿಂತ ಭಿನ್ನವಾಗಿ, ಪೋಕ್ಸೋ ಸಂತ್ರಸ್ತೆಯ ಕುಟುಂಬವನ್ನೇ ಗುರಿಯಾಗಿಸಿಕೊಂಡು ಲಂಚ ಕೇಳಿರುವ ಆರೋಪ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.



