ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಪುಸ್ತಕಗಳಲ್ಲಿ ಓದಿದ ಕೃಷಿಯನ್ನು ನೇರವಾಗಿ ಹೊಲದಲ್ಲಿ ಕಂಡು, ಮಣ್ಣಿನ ಸುವಾಸನೆ ಅನುಭವಿಸಿ, ಔಷಧೀಯ ಸಸ್ಯಗಳ ಉಪಯೋಗ ಅರಿತು, ವಿಷಮುಕ್ತ ಕೃಷಿಯ ಮಹತ್ವ ತಿಳಿದುಕೊಂಡ ಅಪರೂಪದ ಅನುಭವ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ದೊರೆಯಿತು.
ತಾಲ್ಲೂಕಿನ ಹೊಸಪೇಟೆ ರಸ್ತೆಯಲ್ಲಿರುವ ಮ್ಯಾನೋರ್ ಫಾರ್ಮ್ನಲ್ಲಿ ಆಯೋಜಿಸಿದ್ದ ಕೃಷಿ ಅಧ್ಯಯನ ಪ್ರವಾಸದಲ್ಲಿ ಕೊಟ್ಟೂರಿನ ಇಂದು ಶಿಕ್ಷಣ ಸಂಸ್ಥೆಯ ಸಿಬಿಎಸ್ಇ ವಿಭಾಗದ 3ರಿಂದ 6ನೇ ತರಗತಿಯ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ 20ಕ್ಕೂ ಹೆಚ್ಚು ಶಿಕ್ಷಕರು ಭಾಗವಹಿಸಿ ಮೂರು ಗಂಟೆಗಳ ಕಾಲ ನೆಮ್ಮದಿ ಕೃಷಿಯ ಕುರಿತು ಪ್ರಾಯೋಗಿಕ ಪಾಠಗಳನ್ನು ಕಲಿತರು.
ನೆಮ್ಮದಿ ಕೃಷಿ ಪದ್ಧತಿಯ ರೂವಾರಿಯಾಗಿರುವ ವಸಂತ ಮಾಲವಿ, ಕೃಷಿ ಎಂದರೆ ಕೇವಲ ಬೆಳೆಯಲ್ಲ, ಅದು ಆರೋಗ್ಯಕರ ಬದುಕಿನ ಅಡಿಪಾಯ ಎಂದು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಟ್ಟರು.
ತೋಟದಲ್ಲಿರುವ 58ಕ್ಕೂ ಹೆಚ್ಚು ಹಣ್ಣಿನ ಮರಗಳು, ಅಪರೂಪದ ಔಷಧೀಯ ಸಸ್ಯಗಳು ಹಾಗೂ ಕಳೆಗಳ ನಡುವೆಯೇ ಬೆಳೆಯುವ ಔಷಧಿ ಸಸ್ಯಗಳನ್ನು ತೋರಿಸಿ ಅವುಗಳ ಔಷಧೀಯ ಗುಣಗಳನ್ನು ವಿವರಿಸಿದರು. ವಿದ್ಯಾರ್ಥಿಗಳು ಕುತೂಹಲದಿಂದ ಪ್ರಶ್ನೆಗಳನ್ನು ಕೇಳಿದರೆ, ಶಿಕ್ಷಕರು ಮತ್ತು ಮಕ್ಕಳು ಟಿಪ್ಪಣಿಗಳನ್ನು ಮಾಡಿಕೊಂಡು ಕೃಷಿ ಜ್ಞಾನವನ್ನು ಅಳವಡಿಸಿಕೊಂಡರು.
ನೆಮ್ಮದಿ ಕೃಷಿ ಪದ್ಧತಿಯಿಂದ ಕಳೆದ ಎಂಟು ವರ್ಷಗಳಲ್ಲಿ ಪಡೆದ ಅನುಭವ, ಮಣ್ಣಿನ ಫಲವತ್ತತೆ ಹೆಚ್ಚಿಸುವ ವಿಧಾನ, ಯಾವುದೇ ಉಳುಮೆ ಮಾಡದೆ ಹಾಗೂ ತರಗೆಲೆಗಳನ್ನು ತೆಗೆಯದೆ ಕೃಷಿ ಮಾಡುವ ವಿಶೇಷತೆಯನ್ನೂ ಮಾಲವಿ ವಿವರಿಸಿದರು.
ಮ್ಯಾನೋರ್ ಫಾರ್ಮ್ನ ಒಡತಿ ಚಂದ್ರಲೇಖಾ ಮಾಲವಿ, ಆರೋಗ್ಯಕರ ಆಹಾರಕ್ಕಾಗಿ ಸಾಂಪ್ರದಾಯಿಕ, ಸಹಜ, ನೈಸರ್ಗಿಕ ಹಾಗೂ ನೆಮ್ಮದಿ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಅನಿವಾರ್ಯ ಎಂದು ಹೇಳಿದರು.
ತೋಟದ ಮಣ್ಣಿನಲ್ಲಿರುವ ಸಾವಯವ ಇಂಗಾಲದ ಪ್ರಮಾಣ, ಎಲೆಗಳ ಕೊಳೆತದಿಂದ ಮಣ್ಣಿನ ಫಲವತ್ತತೆ ಹೆಚ್ಚುವ ವಿಧಾನವನ್ನು ಮಾಲವಿ ದಂಪತಿ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ಮೂಲಕ ತೋರಿಸಿದರು. ಹಲವು ವಿದ್ಯಾರ್ಥಿಗಳು ಮಣ್ಣಿನ ಸುವಾಸನೆಯನ್ನು ಅನುಭವಿಸಿ, ಸ್ವಲ್ಪ ಮಣ್ಣನ್ನು ಮನೆಗೆ ಕೊಂಡೊಯ್ದು ಪಾಲಕರಿಗೆ ತೋರಿಸುವ ಉತ್ಸಾಹ ಪ್ರದರ್ಶಿಸಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಇಂದು ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಚೇತನ್ ಕುಮಾರ್, ಪುಸ್ತಕದ ಪಾಠಕ್ಕಿಂತ ಬದುಕಿನ ಪಾಠವನ್ನು ವಿದ್ಯಾರ್ಥಿಗಳಿಗೆ ನೀಡಿದ ಮ್ಯಾನೋರ್ ಫಾರ್ಮ್ಗೆ ಕೃತಜ್ಞತೆ ಸಲ್ಲಿಸಿದರು.
ಶಿಕ್ಷಕ ಜಗದೀಶ್ ಮಾತನಾಡಿ, “ಕೃಷಿಯನ್ನು ಪ್ರೀತಿಯಿಂದ ಮಾಡಿದರೆ ವಯಸ್ಸು ಅಡ್ಡಿಯಾಗುವುದಿಲ್ಲ ಎಂಬುದನ್ನು ಮಾಲವಿ ದಂಪತಿ ತಮ್ಮ ಜೀವನದ ಮೂಲಕ ತೋರಿಸಿದ್ದಾರೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳು ತಮ್ಮ ಪಾಲಕರನ್ನೂ ಮ್ಯಾನೋರ್ ಫಾರ್ಮ್ಗೆ ಕರೆತರುವ ಭರವಸೆ ನೀಡಿದ್ದು, ಮಾಲವಿ ದಂಪತಿ ವಿಷಮುಕ್ತ ಕೃಷಿಯ ಸಂದೇಶದೊಂದಿಗೆ ಅವರನ್ನು ಬೀಳ್ಕೊಟ್ಟರು.
“ಪಾಲಾಶ, ಅರ್ಜುನ, ಸೀತಾ ಅಶೋಕ, ರುದ್ರಾಕ್ಷಿ, ರಾಮಫಲ, ಲಕ್ಷ್ಮಣ ಫಲ ಸೇರಿದಂತೆ ಅನೇಕ ಔಷಧೀಯ ಹಾಗೂ ಹಣ್ಣಿನ ಸಸ್ಯಗಳ ಉಪಯೋಗವನ್ನು ಮಕ್ಕಳು ತಿಳಿದುಕೊಂಡಿದ್ದಾರೆ. ಪ್ರಕೃತಿಯೇ ನಮ್ಮ ಅತ್ಯುತ್ತಮ ಔಷಧಾಲಯ.”
– ಚಂದ್ರಲೇಖಾ ಮಾಲವಿ, ಮ್ಯಾನೋರ್ ಫಾರ್ಮ್
“ನಾವು ಏನನ್ನು ಬಿತ್ತುತ್ತೇವೆಯೋ ಅದನ್ನೇ ತಿನ್ನುತ್ತೇವೆ. ವಿಷ ಬಿತ್ತಿದರೆ ವಿಷವೇ ನಮ್ಮ ಊಟವಾಗುತ್ತದೆ. ಆರೋಗ್ಯಕರ ಬದುಕಿಗೆ ವಿಷಮುಕ್ತ ಕೃಷಿಯೇ ಏಕೈಕ ದಾರಿ.”
– ವಸಂತ ಮಾಲವಿ, ನೆಮ್ಮದಿ ಕೃಷಿ ರೂವಾರಿ



