ಶಿವಮೊಗ್ಗ: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧ ಪಕ್ಷಗಳು ಉದ್ದೇಶಪೂರ್ವಕವಾಗಿ ತಡೆದು ಸೋಲಿಸಿದವು ಎಂದು ಸಂಸದ ಬಿ.ವೈ. ರಾಘವೇಂದ್ರ ಆರೋಪಿಸಿದ್ದಾರೆ.
ಶಿವಮೊಗ್ಗದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಣ್ಣನವರ ಸಿದ್ಧಾಂತಗಳು ಹಾಗೂ ಸ್ತ್ರೀ ಸ್ವಾತಂತ್ರ್ಯದ ಮೌಲ್ಯಗಳಿಗೆ ಧಕ್ಕೆ ತರುವ ಕೆಲಸ ಕಾಂಗ್ರೆಸ್ ನೇತೃತ್ವದಲ್ಲಿ ನಡೆದಿದೆ. ಇದಕ್ಕೆ ಟಿಎಂಸಿ ಹಾಗೂ ಡಿಎಂಕೆ ಪಕ್ಷಗಳು ಸಹ ಕೈಜೋಡಿಸಿದ್ದವೆಂದು ಟೀಕಿಸಿದರು.
ಯಾವುದೇ ವಿಧೇಯಕವನ್ನು ಜಾರಿಗೊಳಿಸಲು ಸಂವಿಧಾನದ ಪ್ರಕಾರ ಎರಡು-ಮೂರರಷ್ಟು ಬಹುಮತ ಅಗತ್ಯವಿದೆ. ಆದರೆ, ಈ ಮಸೂದೆ ಸೇರಿ ಮೂರು ವಿಧೇಯಕಗಳ ಜಾರಿಗೆ ವಿರೋಧ ಪಕ್ಷಗಳು ಅಡ್ಡಿಪಡಿಸಿವೆ ಎಂದು ಹೇಳಿದರು.
“ಮಹಿಳಾ ಶಕ್ತಿಗೆ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಸಮರ್ಪಕ ಪ್ರತಿನಿಧಿತ್ವ ಸಿಗಬೇಕಿತ್ತು. ಆದರೆ, ವಿಪಕ್ಷಗಳು ತಪ್ಪು ಮಾಹಿತಿಯನ್ನು ಹಬ್ಬಿಸಿ ಮಸೂದೆ ಜಾರಿಯಾಗದಂತೆ ತಡೆಯುವ ಕೆಲಸ ಮಾಡಿವೆ” ಎಂದು ಅವರು ಆರೋಪಿಸಿದರು.
ಇದು ದುರುದ್ದೇಶದಿಂದ ಐತಿಹಾಸಿಕ ಮಸೂದೆಗೆ ತಡೆ ನೀಡಿದಂತಾಗಿದೆ. ದೇಶದ ತಾಯಂದಿರು ಮತ್ತು ಸಹೋದರಿಯರ ಮುಂದೆ ಪ್ರಧಾನಮಂತ್ರಿ ಕ್ಷಮೆಯಾಚಿಸಿದ್ದಾರೆ. ಮಹಿಳೆಯರು ಎಲ್ಲವನ್ನೂ ಮರೆತರೂ, ಅವಮಾನವನ್ನು ಮರೆಯುವುದಿಲ್ಲ ಎಂದು ಹೇಳಿದರು.
ಇದಲ್ಲದೆ, ಮಲೆನಾಡಿನ ಭೌಗೋಳಿಕ ವಿಸ್ತಾರ ಹೆಚ್ಚಿರುವುದಾದರೂ ಜನಸಂಖ್ಯೆ ಆಧಾರದಲ್ಲಿ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ ಕಡಿಮೆಯಾಗಿದೆ. ಆದ್ದರಿಂದ ಪಶ್ಚಿಮ ಘಟ್ಟ ಪ್ರದೇಶಕ್ಕೆ ವಿಶೇಷ ಮಾನ್ಯತೆ ನೀಡಿ, ಜನಸಂಖ್ಯೆಯಷ್ಟೇ ಅಲ್ಲದೆ ಭೌಗೋಳಿಕ ಅಂಶವನ್ನೂ ಪರಿಗಣಿಸಿ ಹೊಸ ಕ್ಷೇತ್ರಗಳ ರಚನೆ ಮಾಡಬೇಕು ಎಂದು ಆಗ್ರಹಿಸಿದರು.



