ರಾಯ್ಪುರ್: ಛತ್ತೀಸ್ಗಢದ ಜಶ್ಪುರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಖಾಸಗಿ ವಿಮಾನವೊಂದು ಮರಕ್ಕೆ ಡಿಕ್ಕಿಯಾಗಿ ಪತನಗೊಂಡಿರುವ ಘಟನೆ ವರದಿಯಾಗಿದೆ.
ಈ ಅವಘಡ ಜಶ್ಪುರ ಜಿಲ್ಲೆ ವ್ಯಾಪ್ತಿಯ ನಾರಾಯಣಪುರ ಪೊಲೀಸ್ ಠಾಣೆ ಪ್ರದೇಶದ ಖುರಾಸಗಢ ಗ್ರಾಮದ ಸಮೀಪದ ರತನ್ಪಹ್ಲಿ ಅರಣ್ಯದಲ್ಲಿ ನಡೆದಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಸಣ್ಣ ಸಿಂಗಲ್-ಎಂಜಿನ್ ಪ್ರೊಪೆಲ್ಲರ್ ವಿಮಾನವು ನೆಲದಿಂದ ಸುಮಾರು 30 ಅಡಿ ಎತ್ತರದಲ್ಲಿ ಹಾರುತ್ತಿರುವಾಗ ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿಯಾಗಿದೆ. ಅಪಘಾತಕ್ಕೂ ಕೆಲವೇ ಕ್ಷಣಗಳ ಮುನ್ನ ವಿಮಾನ ಅತೀ ಕಡಿಮೆ ಎತ್ತರದಲ್ಲಿ ಹಾರುತ್ತಿದ್ದ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.
ವಿಮಾನ ಪತನಗೊಂಡ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿರುವುದು ಕಂಡುಬಂದಿದ್ದು, ಘಟನೆ ಸ್ಥಳಕ್ಕೆ ರಕ್ಷಣಾ ತಂಡಗಳು ಧಾವಿಸಿ ಪರಿಶೀಲನೆ ನಡೆಸುತ್ತಿವೆ. ಆದರೆ, ಅಪಘಾತದ ಕುರಿತು ಇನ್ನೂ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



