ದಾವಣಗೆರೆ: ಪಂಚಮಸಾಲಿ ಗುರುಪೀಠದ ಒಳಜಗಳ ಮತ್ತಷ್ಟು ತೀವ್ರಗೊಂಡಿದ್ದು, ವಚನಾನಂದ ಸ್ವಾಮೀಜಿ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ಪಂಚಮಸಾಲಿ ಮಠದ ಟ್ರಸ್ಟ್ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ ಅವರು ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಗೆ ಲಿಖಿತ ದೂರು ಸಲ್ಲಿಸಿದ್ದಾರೆ.
ಹರಜಾತ್ರೆ ಸಂದರ್ಭದಲ್ಲಿ ಭಕ್ತರಿಂದ ಲಕ್ಷಾಂತರ ರೂಪಾಯಿ ಸಂಗ್ರಹಿಸಿ ದುರುಪಯೋಗ ಮಾಡಿದ್ದಾರೆ ಹಾಗೂ ‘ಶ್ವಾಸ’ ಕೇಂದ್ರದ ಸಂಪರ್ಕದಲ್ಲೇ ಮುಂದುವರಿದಿದ್ದಾರೆ ಎಂಬ ಆರೋಪಗಳನ್ನು ಮಾಡಿದ್ದಾರೆ.
ದೂರಿನ ಪ್ರಕಾರ, 2018ರ ಏಪ್ರಿಲ್ನಲ್ಲಿ ಗುರುಪೀಠಕ್ಕೆ ನೇಮಕವಾದಾಗ ವಚನಾನಂದ ಸ್ವಾಮೀಜಿಗೆ ಬೆಂಗಳೂರಿನ ‘ಶ್ವಾಸ’ ಸಂಸ್ಥೆಯಿಂದ ಸಂಪೂರ್ಣವಾಗಿ ದೂರವಾಗಬೇಕೆಂದು ಷರತ್ತು ವಿಧಿಸಲಾಗಿತ್ತು. ಆದರೆ ಅವರು ಆ ಸಂಸ್ಥೆಯೊಂದಿಗೆ ಸಂಬಂಧವನ್ನು ಕಡಿತಗೊಳಿಸದೇ ಹೆಚ್ಚಿನ ಸಮಯವನ್ನು ಅಲ್ಲಿ ಕಳೆದಿದ್ದಾರೆ ಎನ್ನಲಾಗಿದೆ.
ಇದರಿಂದ ಮಠದ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ತೋರಿಸದಿದ್ದರೆಂದು ಭಕ್ತರಲ್ಲಿ ಅಸಮಾಧಾನ ಉಂಟಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದೇ ವೇಳೆ, 2026ರ ಹರಜಾತ್ರೆಯಲ್ಲಿ ಭಕ್ತರಿಂದ ಲಕ್ಷಾಂತರ ರೂಪಾಯಿ ಹಣವನ್ನು ರಸೀದಿ ನೀಡದೆ ಸಂಗ್ರಹಿಸಿ,
ಅದನ್ನು ತಮ್ಮ ವೈಯಕ್ತಿಕ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ನಂತರ ಹಣದ ಬಗ್ಗೆ ಪ್ರಶ್ನಿಸಿದ ಭಕ್ತರಿಗೆ ಸ್ಪಷ್ಟ ಉತ್ತರ ನೀಡದೆ ಅವಾಚ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಇದಲ್ಲದೆ, ಸಂಗ್ರಹಿಸಿದ ಹಣವನ್ನು ಟ್ರಸ್ಟ್ಗೆ ಸಲ್ಲಿಸದೆ,
ಬೆಂಬಲಿಗರೊಂದಿಗೆ ಮಠದ ಆವರಣದಲ್ಲಿ ಗೊಂದಲ ಸೃಷ್ಟಿಸಿ ಭಕ್ತರಲ್ಲಿ ಆತಂಕ ಉಂಟುಮಾಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಈ ಎಲ್ಲ ಕಾರಣಗಳಿಂದ ಸುದೀರ್ಘ ಚರ್ಚೆಯ ಬಳಿಕ ವಚನಾನಂದ ಸ್ವಾಮೀಜಿಯನ್ನು ಜಗದ್ಗುರು ಸ್ಥಾನದಿಂದ ಪದಚ್ಯುತಿಗೊಳಿಸಲಾಗಿದೆ ಎಂದು ಟ್ರಸ್ಟ್ ಸ್ಪಷ್ಟಪಡಿಸಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.



