ಮಾಡೆಲ್ ಮತ್ತು ಇನ್‌ಫ್ಲುಯೆನ್ಸರ್ ಆಗಿ ಗುರುತಿಸಿಕೊಂಡಿದ್ದ ಹರ್ಷ ರಿಚಾರಿಯಾ ಇದೀಗ ಜೀವನದ ದಿಕ್ಕೇ ಬದಲಿಸಿ ಸನ್ಯಾಸ ಸ್ವೀಕರಿಸಿದ್ದಾರೆ. ಪ್ರಯಾಗರಾಜ್ ಮಹಾಕುಂಭದ ಬಳಿಕ ಗಮನ ಸೆಳೆದಿದ್ದ ಅವರು, ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ತಮ್ಮ ಗುರು ಮಹಾಮಂಡಲೇಶ್ವರ ಸುಮಾನಂದ ಮಹಾರಾಜರ ಸಮ್ಮುಖದಲ್ಲಿ ಪಿಂಡ ಬಿಡುವ ಮೂಲಕ ಲೌಕಿಕ ಬದುಕಿಗೆ ಅಂತ್ಯ ಘೋಷಿಸಿದ್ದಾರೆ. ಸಂಪ್ರದಾಯಬದ್ಧ ವಿಧಿವಿಧಾನಗಳೊಂದಿಗೆ ನಡೆದ ದೀಕ್ಷಾ ಕಾರ್ಯಕ್ರಮದ ಬಳಿಕ ಅವರು ‘ಸ್ವಾಮಿ ಹರ್ಷಾನಂದ ಗಿರಿ’ ಎಂದು ಹೊಸ ಹೆಸರನ್ನು ಪಡೆದಿದ್ದಾರೆ.
32ನೇ ವಯಸ್ಸಿನಲ್ಲಿ ಇಂತಹ ತೀವ್ರ ನಿರ್ಧಾರ ಕೈಗೊಂಡಿರುವುದು ವಿಶೇಷವಾಗಿದ್ದು, ಕಳೆದ ಒಂದೂವರೆ ವರ್ಷಗಳಿಂದ ಅವರು ಆಧ್ಯಾತ್ಮದತ್ತ ಒಲವು ತೋರಿಸುತ್ತಿದ್ದರು. ಸನ್ಯಾಸ ಸ್ವೀಕಾರದ ನಂತರ ಮಾತನಾಡಿದ ಅವರು, ಇನ್ನು ಮುಂದೆ ಧರ್ಮ ಮತ್ತು ಸಮಾಜ ಸೇವೆಯತ್ತ ತಮ್ಮ ಜೀವನವನ್ನು ಸಮರ್ಪಿಸುವುದಾಗಿ ತಿಳಿಸಿದ್ದಾರೆ.
ಗರುಡ ಪುರಾಣದಲ್ಲಿ ಉಲ್ಲೇಖವಾಗಿರುವಂತೆ, ಪಿಂಡ ವಿಧಿ ಸಾಮಾನ್ಯವಾಗಿ ಪೂರ್ವಜರ ಶಾಂತಿಗಾಗಿ ನಡೆಯುತ್ತದೆ. ಆದರೆ ಕೆಲವರು ತಮ್ಮ ಲೌಕಿಕ ಜವಾಬ್ದಾರಿಗಳನ್ನು ತ್ಯಜಿಸುವ ಸಂಕೇತವಾಗಿ ಜೀವಂತವಾಗಿಯೇ ಪಿಂಡ ಬಿಡುವ ಮೂಲಕ ಸನ್ಯಾಸ ಸ್ವೀಕರಿಸುತ್ತಾರೆ. ಹರ್ಷ ರಿಚಾರಿಯಾ ಅವರ ಈ ಹೆಜ್ಜೆ ಆಧ್ಯಾತ್ಮಿಕ ಪರಿವರ್ತನೆಯ ಸ್ಪಷ್ಟ ಉದಾಹರಣೆಯಾಗಿ ಕಾಣಿಸುತ್ತಿದೆ.



