ಹೈದರಾಬಾದ್: ‘ಪೆದ್ದಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳತ್ತ ದಾಪುಗಾಲಿಡುತ್ತಿರುವ ನಡುವೆಯೇ, ನಾಯಕಿ ಜಾನ್ವಿ ಕಪೂರ್ ಪಾತ್ರದ ಬಗ್ಗೆ ಹೊಸ ವಿವಾದ ಎದ್ದಿದೆ. ಚಿತ್ರದಲ್ಲಿ ನಟಿಗೆ ಸಮರ್ಪಕ ಪ್ರಾಮುಖ್ಯತೆ ನೀಡಲಾಗಿಲ್ಲ ಎಂಬ ಟೀಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಕೆಲವು ಸಿನಿಪ್ರೇಮಿಗಳು ಮತ್ತು ನೆಟ್ಟಿಗರು, ಜಾನ್ವಿ ಪಾತ್ರವನ್ನು ಕಥೆಯ ಕೇಂದ್ರಬಿಂದುವಾಗಿಸುವ ಬದಲು ಗ್ಲಾಮರ್ ಅಂಶಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಆರೋಪಿಸಿದ್ದಾರೆ. ‘ದೇವರ’ ಚಿತ್ರದ ಬಳಿಕ ಮತ್ತೊಮ್ಮೆ ಇದೇ ರೀತಿಯ ಚರ್ಚೆ ಜಾನ್ವಿ ಪಾತ್ರದ ಸುತ್ತ ಶುರುವಾಗಿದೆ.
ಈ ಟೀಕೆಗಳಿಗೆ ಪ್ರತಿಕ್ರಿಯಿಸಿರುವ ನಿರ್ದೇಶಕ ಬುಚ್ಚಿ ಬಾಬು ಸನಾ, ಚಿತ್ರದ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ. “ರಾಮ್ ಚರಣ್ ಮತ್ತು ಜಾನ್ವಿ ನಡುವಿನ ಪ್ರೇಮಕಥೆಯೇ ಚಿತ್ರದ ಪ್ರಮುಖ ಭಾವನಾತ್ಮಕ ಅಂಶ. ಯಾವುದೇ ವಿವಾದ ಸೃಷ್ಟಿಸುವ ಅಥವಾ ನಟಿಯ ಪಾತ್ರವನ್ನು ಕಡಿಮೆ ಮಾಡುವ ಉದ್ದೇಶ ನಮ್ಮದಾಗಿರಲಿಲ್ಲ” ಎಂದು ಹೇಳಿದ್ದಾರೆ.
ಹಳ್ಳಿ ಹಿನ್ನೆಲೆಯ ಕಥೆ ಹಾಗೂ ಪಾತ್ರಗಳ ಸ್ವಭಾವಕ್ಕೆ ಅನುಗುಣವಾಗಿಯೇ ಚಿತ್ರಕಥೆ ರೂಪಿಸಲಾಗಿದೆ ಎಂದು ಹೇಳಿರುವ ಅವರು, ಜಾನ್ವಿ ಪಾತ್ರದ ಬಗ್ಗೆ ಬಂದಿರುವ ನೆಗೆಟಿವ್ ಪ್ರತಿಕ್ರಿಯೆಗಳು ತಮ್ಮನ್ನು ಅಚ್ಚರಿಗೊಳಿಸಿವೆ ಎಂದಿದ್ದಾರೆ.
ಸದ್ಯ ‘ಪೆದ್ದಿ’ ಚಿತ್ರದ ಯಶಸ್ಸಿನ ಜೊತೆಗೆ ಜಾನ್ವಿ ಕಪೂರ್ ಪಾತ್ರದ ಚಿತ್ರಣವೂ ಚರ್ಚೆಯ ವಿಷಯವಾಗಿದ್ದು, ನಿರ್ದೇಶಕರ ಸ್ಪಷ್ಟನೆ ಬಳಿಕ ಈ ವಿವಾದ ಯಾವ ದಿಕ್ಕು ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.



