ಬಣಕಾರ್ ಸುರೇಶ್ ಅಭ್ಯರ್ಥಿ ಘೋಷಣೆ – ಶಿಸ್ತು ಉಲ್ಲಂಘನೆಗೆ ಕ್ರಮ ಎಚ್ಚರಿಕೆ
ಹಗರಿಬೊಮ್ಮನಹಳ್ಳಿ: ಪಟ್ಟಣದ ಪುರಸಭೆ ಅಧ್ಯಕ್ಷರ ಚುನಾವಣೆ ಎಪ್ರಿಲ್ 30ರಂದು ನಡೆಯಲಿದ್ದು, ಭಾರತೀಯ ಜನತಾ ಪಕ್ಷ (ಬಿಜೆಪಿ)ದಿಂದ ಬಣಕಾರ್ ಸುರೇಶ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿ ಘೋಷಿಸಲಾಗಿದೆ ಎಂದು ಮಂಡಲ ಅಧ್ಯಕ್ಷ ಬೆಣಕಲ್ಲು ಪ್ರಕಾಶ್ ತಿಳಿಸಿದ್ದಾರೆ.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಅಧ್ಯಕ್ಷರ ಚುನಾವಣೆಯಲ್ಲಿ ಪಕ್ಷದ ಎಲ್ಲಾ ಸದಸ್ಯರ ಮೇಲೆ ನಂಬಿಕೆ ಇಟ್ಟು ವಿಪ್ ಜಾರಿ ಮಾಡಲಾಗಿರಲಿಲ್ಲ. ಆದರೆ, ಆ ವೇಳೆ ಪಕ್ಷದ ಇಬ್ಬರು ಸದಸ್ಯರು ನಂಬಿಕೆ ದ್ರೋಹ ಮಾಡಿದ್ದನ್ನು ಸ್ಮರಿಸಿದರು.
ಈ ಬಾರಿ ಅಂತಹ ಪರಿಸ್ಥಿತಿ ಮರುಕಳಿಸದಂತೆ ಹಾಗೂ ಪಕ್ಷಕ್ಕೆ ಮುಜುಗರ ತಪ್ಪಿಸಲು ವಿಪ್ ಜಾರಿ ಮಾಡಲಾಗಿದೆ. ಚುನಾವಣೆಯ ವೇಳೆ ವಿಪ್ ಉಲ್ಲಂಘಿಸುವ ಸದಸ್ಯರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಹಾಗೂ ಈ ವಿಚಾರವನ್ನು ಹಾಲಿ ಶಾಸಕರು, ಬಿಜೆಪಿ ಜಿಲ್ಲಾಧ್ಯಕ್ಷರು ಹಾಗೂ ಪಕ್ಷದ ಪ್ರಮುಖ ಮುಖಂಡರ ಗಮನಕ್ಕೂ ತಂದಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆಯ ಸದಸ್ಯರಾದ ಜೋಗಿ ಹನುಮಂತಪ್ಪ, ಬಣಕಾರ್ ಸುರೇಶ್, ನವೀನ್ ಕುಮಾರ್, ದೀಪಕ್ ಕಠಾರೆ, ನಾಗರಾಜ್ ಜನ್ನು ಹಾಗೂ ಬಿಜೆಪಿ ನಗರ ಘಟಕದ ಅಧ್ಯಕ್ಷ ಮಂಜುನಾಥ್ ಹಿರೇಮಠ್, ಮಂಡಲ ಕಾರ್ಯದರ್ಶಿಗಳಾದ ದಿವಾಕರ ಗೌಡ್ರು, ಹನುಮಂತಪ್ಪ ಕೋಗಳಿ ಸೇರಿದಂತೆ ಪಕ್ಷದ ಪ್ರಮುಖರಾದ ಅಂಬಳಿ ರವೀಂದ್ರಗೌಡ್ರು, ಸಂದೀಪ್, ಮಂಜುನಾಥ್ ಉಪಸ್ಥಿತರಿದ್ದರು.



