ಗದಗ: ಜಿಲ್ಲೆಯ ಮುಂಡರಗಿ ಪಟ್ಟಣದ ಜಾಗೃತ ಸರ್ಕಲ್ ಸಮೀಪ ಭಾರೀ ಗಾಳಿಯ ಪರಿಣಾಮ ಮನೆಯ ಮೇಲ್ಚಾವಣಿಯಲ್ಲಿ ಅಳವಡಿಸಲಾಗಿದ್ದ ಮೊಬೈಲ್ ಟವರ್ ಧರೆಗೆ ಉರುಳಿದ ಘಟನೆ ನಡೆದಿದೆ.
ನಿನ್ನೆ ಸಂಜೆ ವೇಳೆಯಲ್ಲಿ ಏಕಾಏಕಿ ಬೀಸಿದ ಭಾರೀ ಗಾಳಿಯಿಂದ ಈ ಅವಾಂತರ ಸಂಭವಿಸಿದ್ದು, ಮನೆ ಮುಂದೆ ನಿಲ್ಲಿಸಿದ್ದ ಹಲವು ಬೈಕ್‌ಗಳು ಜಖಂಗೊಂಡಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಟವರ್ ಕುಸಿತದಿಂದ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸ್ಥಳಕ್ಕೆ ಬಂದ ಸಾರ್ವಜನಿಕರು ಮತ್ತು ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ಈ ಘಟನೆ ಹಿನ್ನೆಲೆಯಲ್ಲಿ ಮುಂಡರಗಿ ಪುರಸಭೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖಾಸಗಿ ಕಂಪನಿಗಳಿಗೆ ಮನೆಯಿಂದ ಮೇಲೆ ಟವರ್ ಅಳವಡಿಸಲು ಅನುಮತಿ ನೀಡಬಾರದಿತ್ತು ಎಂದು ಕಿಡಿಕಾರಿದ್ದಾರೆ. ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.



