ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವಾಹನ ಸವಾರರಿಗೆ ಹೊಸ ಆತಂಕ ಎದುರಾಗಿದೆ.
ನಗರದ ಹೆಬ್ಬಾಳ ಮತ್ತು ಗೊರಗುಂಟೆಪಾಳ್ಯ ನಡುವಿನ ಪ್ರಮುಖ ರಸ್ತೆಯಲ್ಲಿ ಪಂಕ್ಚರ್ ದಂಧೆಕೋರರ ಸಂಚು ಬೆಳಕಿಗೆ ಬಂದಿದೆ.
ಕಳೆದ ಕೆಲವು ದಿನಗಳಿಂದ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಸರಣಿ ಪಂಕ್ಚರ್ ಸಮಸ್ಯೆ ಎದುರಾಗುತ್ತಿತ್ತು. ಇದರಿಂದ ಸಂಶಯಗೊಂಡು ಪರಿಶೀಲನೆ ನಡೆಸಿದಾಗ ರಸ್ತೆಯ ಮೇಲೆ ಉದ್ದೇಶಪೂರ್ವಕವಾಗಿ ನೂರಾರು ಮೊಳೆಗಳನ್ನು ಹರಡಿರುವುದು ಪತ್ತೆಯಾಗಿದೆ. ಇದು ಸಾಮಾನ್ಯ ಘಟನೆ ಅಲ್ಲ, ವಾಹನ ಸವಾರರನ್ನು ಸುಲಿಗೆ ಮಾಡಲು ನಡೆಸುತ್ತಿರುವ ಸಂಚು ಎಂಬ ಆರೋಪ ಕೇಳಿಬಂದಿದೆ.
ವಿಶೇಷವೆಂದರೆ, ಮೊಳೆಗಳು ಬಿದ್ದಿರುವ ಸ್ಥಳದ ಹತ್ತಿರವೇ ಪಂಕ್ಚರ್ ರಿಪೇರಿ ಅಂಗಡಿಗಳು ಇರುವುದರಿಂದ ಅನುಮಾನ ಮತ್ತಷ್ಟು ಗಟ್ಟಿಯಾಗುತ್ತಿದೆ. ವಾಹನಗಳು ಪಂಕ್ಚರ್ ಆದಾಗ ಹೆಚ್ಚಿನ ಹಣ ವಸೂಲಿ ಮಾಡಲು ಈ ರೀತಿಯ ಕೃತ್ಯ ನಡೆಸಲಾಗುತ್ತಿದೆ ಎನ್ನಲಾಗಿದೆ.
ವೇಗವಾಗಿ ಸಾಗುತ್ತಿರುವ ವಾಹನಗಳ ಟೈರ್ ಏಕಾಏಕಿ ಪಂಕ್ಚರ್ ಆದರೆ ನಿಯಂತ್ರಣ ತಪ್ಪಿ ಭಾರೀ ಅಪಘಾತ ಸಂಭವಿಸುವ ಅಪಾಯವಿದೆ. ಇದರಿಂದ ಸಾರ್ವಜನಿಕರ ಪ್ರಾಣಕ್ಕೂ ಅಪಾಯ ಉಂಟಾಗುತ್ತಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ತಪ್ಪಿತಸ್ಥರನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಬೆಂಗಳೂರಿನಂತಹ ಐಟಿ ನಗರದಲ್ಲಿ ಇಂತಹ ದಂಧೆಗಳು ನಡೆಯುತ್ತಿರುವುದು ನಗರದ ಪ್ರತಿಷ್ಠೆಗೆ ಧಕ್ಕೆಯಾಗಿದೆ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ.



