ಕಲಬುರಗಿ: ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದು ಏಳು ಮಂದಿ ಮೃತಪಟ್ಟ ದುರಂತಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವುದರ ಜೊತೆಗೆ ಭವಿಷ್ಯದಲ್ಲಿ ಇಂತಹ ಅವಘಡಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಖರ್ಗೆ, “ಕುಸಿದ ಕಾಂಪೌಂಡ್ ಹಳೆಯದಾಗಿತ್ತೇ ಅಥವಾ ಕಳಪೆ ಗುಣಮಟ್ಟದಲ್ಲಿ ನಿರ್ಮಿಸಲಾಗಿತ್ತೇ ಎಂಬ ಬಗ್ಗೆ ತನಿಖೆ ನಡೆಸಬೇಕು. ದುರಂತದಲ್ಲಿ ಹಾನಿಗೊಳಗಾದವರಿಗೆ ಹಾಗೂ ಅಲ್ಲಿ ವ್ಯಾಪಾರ ಮಾಡುತ್ತಿದ್ದ ಸಣ್ಣ ವ್ಯಾಪಾರಿಗಳಿಗೆ ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕು” ಎಂದು ಹೇಳಿದರು.
ಅದಲ್ಲದೆ ಭವಿಷ್ಯದಲ್ಲಿ ಇಂತಹ ಅನಾಹುತಗಳು ಸಂಭವಿಸದಂತೆ ಕ್ರಮ ಕೈಗೊಳ್ಳಬೇಕು. ಕಾಂಪೌಂಡ್ಗಳ ಬಳಿ ಬೀದಿ ವ್ಯಾಪಾರಕ್ಕೆ ಅವಕಾಶ ನೀಡಬಾರದು. ಕಾಂಪೌಂಡ್ಗಳ ಬಳಿ ಯಾರೂ ಮಾರಾಟ ಮಾಡಬೇಡಿ ಎಂದು ಖರ್ಗೆ ಮನವಿ ಮಾಡಿದರು.
ಪುಟ್ಪಾತ್ ಮೇಲೆ ವ್ಯಾಪಾರ ಮಾಡುವ ಸಣ್ಣ ವ್ಯಾಪಾರಿಗಳ ಸಮಸ್ಯೆಗಳನ್ನು ನಾವು ಅರ್ಥಮಾಡಿಕೊಳ್ಳಬೇಕು. ಅವರನ್ನು ಅಲ್ಲಿಂದ ತೆರವುಗೊಳಿಸಲು ಹೋದರೆ, ‘ನಮ್ಮ ಹೊಟ್ಟೆ ಮೇಲೆ ಹೊಡೆಯುತ್ತಿದ್ದೀರಿ’ ಎನ್ನುತ್ತಾರೆ. ಆದರೆ ನಗರದ ನಾಗರಿಕರಿಗೆ ಅನಾನುಕೂಲವಾಗಬಾರದು.
ಮುನ್ಸಿಪಾಲಿಟಿಗಳು ಅವರಿಗೆ ಯೋಗ್ಯವಾದ ಸ್ಥಳಗಳನ್ನು ಒದಗಿಸಬೇಕು. ಇಂದು ಬೆಂಗಳೂರಿನಲ್ಲಿ ನಡೆದಂತೆ ನಾಳೆ ಇನ್ನೊಂದು ಕಡೆ ಆಗದಂತೆ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಗಿಗ್ ವರ್ಕರ್ಗಳು ಮತ್ತು ಸಣ್ಣ ವ್ಯಾಪಾರಿಗಳಿಗೆ ಸಹಾಯ ಮಾಡಬೇಕು ಎಂದು ಖರ್ಗೆ ಒತ್ತಾಯಿಸಿದರು.



