ವಿಜಯನಗರ: ಪ್ರೀತಿಸಿದ ಯುವತಿ ತನಗೆ ಸಿಗಲಿಲ್ಲ ಎಂಬ ದ್ವೇಷದಿಂದ ಆಕೆಯ ಅಣ್ಣನನ್ನು ನಡುರಸ್ತೆಯಲ್ಲೇ ಅಟ್ಟಾಡಿಸಿ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಎಂ.ಪಿ. ಪ್ರಕಾಶ್ ನಗರದಲ್ಲಿ ಶನಿವಾರ ರಾತ್ರಿ ನಡೆದಿದೆ.
ಪಾಂಡುರಂಗ ಕಾಲೊನಿಯ ನಿವಾಸಿ ಯೂನೂಸ್ (28) ಕೊಲೆಯಾದ ಯುವಕ. ಚಿತ್ತವಾಡ್ಗಿ ಪ್ರದೇಶದ ಖಾಜಾ ಹಾಗೂ ಆತನ ಸ್ನೇಹಿತ ಇರ್ಫಾನ್ ಹತ್ಯೆ ಮಾಡಿರುವ ಆರೋಪಿಗಳಾಗಿದ್ದು, ಕೃತ್ಯ ಎಸಗಿದ ಕೆಲವೇ ಗಂಟೆಗಳಲ್ಲಿ ಕೊಲೆಗೆ ಬಳಸಿದ ಚಾಕು ಸಮೇತ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಆರೋಪಿ ಖಾಜಾ ಸ್ಥಳೀಯ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಯುವತಿಗೆ ಇತ್ತೀಚೆಗೆ ಬೇರೆಡೆ ನಿಶ್ಚಿತಾರ್ಥ ನಿಗದಿಯಾಗಿತ್ತು. ಪ್ರೀತಿಸಿದ ಯುವತಿ ತನ್ನಿಂದ ದೂರವಾಗಲು ಆಕೆಯ ಅಣ್ಣ ಯೂನೂಸ್ ಕಾರಣ ಎಂದು ಭಾವಿಸಿದ್ದ ಖಾಜಾ, ಆತನ ವಿರುದ್ಧ ದ್ವೇಷ ಬೆಳೆಸಿಕೊಂಡಿದ್ದ ಎನ್ನಲಾಗಿದೆ.
ಭಾನುವಾರ ಯುವತಿಯ ನಿಶ್ಚಿತಾರ್ಥ ಕಾರ್ಯಕ್ರಮ ನಿಗದಿಯಾಗಿದ್ದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಖಾಜಾ ತನ್ನ ಸ್ನೇಹಿತ ಇರ್ಫಾನ್ ಜೊತೆಗೂಡಿ ಯೂನೂಸ್ ಹತ್ಯೆಗೆ ಸಂಚು ರೂಪಿಸಿದ್ದಾನೆ ಎಂದು ತಿಳಿದುಬಂದಿದೆ.
ಶನಿವಾರ ರಾತ್ರಿ ಎಂ.ಪಿ. ಪ್ರಕಾಶ್ ನಗರದಲ್ಲಿ ಯೂನೂಸ್ ತೆರಳುತ್ತಿದ್ದ ವೇಳೆ ಆರೋಪಿಗಳು ಆತನನ್ನು ಅಟ್ಟಾಡಿಸಿಕೊಂಡು ಹೋಗಿದ್ದಾರೆ. ಬಳಿಕ ಕಣ್ಣಿಗೆ ಖಾರದ ಪುಡಿ ಎರಚಿ, ತಪ್ಪಿಸಿಕೊಳ್ಳಲು ಯತ್ನಿಸಿದ ಯೂನೂಸ್‌ನನ್ನು ಹಿಡಿದು ಕತ್ತು ಮತ್ತು ಹೊಟ್ಟೆ ಭಾಗಕ್ಕೆ ಹಲವು ಬಾರಿ ಚಾಕುವಿನಿಂದ ಇರಿದಿದ್ದಾರೆ. ತೀವ್ರ ರಕ್ತಸ್ರಾವದಿಂದ ಯೂನೂಸ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೃತ್ಯ ಎಸಗಿದ ಬಳಿಕ ಆರೋಪಿಗಳಾದ ಖಾಜಾ ಮತ್ತು ಇರ್ಫಾನ್ ನೇರವಾಗಿ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಗೆ ತೆರಳಿ, ಯೂನೂಸ್‌ನನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡು, ರಕ್ತಸಿಕ್ತ ಚಾಕುವನ್ನು ಪೊಲೀಸರಿಗೆ ಒಪ್ಪಿಸಿ ಶರಣಾಗಿದ್ದಾರೆ.
ಘಟನಾ ಸ್ಥಳಕ್ಕೆ ವಿಜಯನಗರ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಂಜುನಾಥ, ಡಿವೈಎಸ್‌ಪಿ ಮುರಳೀಧರರಾವ್ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.



