ಗಂಗಾವತಿ: ಬಿಜೆಪಿ ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷ ವೆಂಕಟೇಶ ಕುರುಬರ್ ಅಲಿಯಾಸ್ ಜೆಎನ್‌ಎನ್ ವೆಂಕಿ ಕೊಲೆ ಪ್ರಕರಣದಲ್ಲಿ ಆರು ಆರೋಪಿಗಳಿಗೆ ಮರಣದಂಡನೆ ವಿಧಿಸಿ ಗಂಗಾವತಿಯ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ್ ಅವರು ಇಂದು ಶಿಕ್ಷೆಯ ಪ್ರಮಾಣ ಪ್ರಕಟಿಸಿದ್ದು, ರವಿ, ಮೈಲಾರಿ, ಧನರಾಜ್, ಭೀಮಾ, ಸಲೀಂ ಹಾಗೂ ಗಂಗಾಧರ ಗೌಳಿಗೆ ಗಲ್ಲು ಶಿಕ್ಷೆ ವಿಧಿಸಿದ್ದಾರೆ.
ಈ ಹಿಂದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಆರು ಆರೋಪಿಗಳನ್ನು ದೋಷಿಗಳೆಂದು ನ್ಯಾಯಾಲಯ ತೀರ್ಪು ನೀಡಿದ್ದು, ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿತ್ತು. ಇಂದು ಅಂತಿಮ ತೀರ್ಪು ಪ್ರಕಟಿಸಿದ ನ್ಯಾಯಾಲಯ, ಅಪರಾಧದ ಗಂಭೀರತೆ ಹಾಗೂ ಆರೋಪಿಗಳ ಹಿಂದಿನ ಅಪರಾಧ ಚರಿತ್ರೆಯನ್ನು ಪರಿಗಣಿಸಿ ಮರಣದಂಡನೆ ವಿಧಿಸಿದೆ.
ಪ್ರಕರಣದ ವಿಚಾರಣೆ ವೇಳೆ ಸಿಸಿಟಿವಿ ದೃಶ್ಯಾವಳಿ ಹಾಗೂ ಇತರ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನ್ಯಾಯಾಲಯ, ಆರೋಪಿಗಳು ಈ ಹಿಂದೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ವಿಚಾರವನ್ನೂ ಗಮನಿಸಿದೆ.
ನ್ಯಾಯಾಧೀಶರು ತೀರ್ಪು ನೀಡುವ ವೇಳೆ, “ಮಾರುತಿ ಎಂಬ ಯುವಕನ ಕೊಲೆ ಪ್ರಕರಣದಲ್ಲಿ ವೆಂಕಟೇಶ ಪ್ರತ್ಯಕ್ಷ ಸಾಕ್ಷಿಯಾಗಿದ್ದು, ಆತನಿಗೆ ಚಿಕಿತ್ಸೆ ದೊರಕುವಂತೆ ಕೊನೆಯವರೆಗೂ ಬೆಂಬಲವಾಗಿ ನಿಂತಿದ್ದ ಕಾರಣಕ್ಕೆ ಪ್ರತೀಕಾರವಾಗಿ ಈ ಕೊಲೆ ನಡೆಸಲಾಗಿದೆ. ಇಂತಹ ಕೃತ್ಯಗಳನ್ನು ಸಭ್ಯ ಸಮಾಜ ಒಪ್ಪಲಾರದು” ಎಂದು ಅಭಿಪ್ರಾಯಪಟ್ಟರು.
ಸರ್ಕಾರಿ ಅಭಿಯೋಜಕಿ ಎಸ್. ನಾಗಲಕ್ಷ್ಮಿ ಮಾಹಿತಿ ನೀಡಿ, ಆರೋಪಿಗಳಿಗೆ ಅಗತ್ಯವಿದ್ದರೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಅವಕಾಶವಿದೆ ಎಂದು ನ್ಯಾಯಾಲಯ ಸೂಚಿಸಿದೆ ಎಂದು ತಿಳಿಸಿದರು.
ಪ್ರಕರಣದ ಹಿನ್ನೆಲೆ:
2025ರ ಅಕ್ಟೋಬರ್ 8ರ ಮಧ್ಯರಾತ್ರಿ ನಗರದ ಹೊರವಲಯದ ರಾಣಾ ಪ್ರತಾಪ್ ಸಿಂಗ್ ವೃತ್ತದ ಸಮೀಪದ ಖಾಸಗಿ ಆಸ್ಪತ್ರೆ ಬಳಿ ವೆಂಕಟೇಶ ಕುರುಬರ್ ಅವರನ್ನು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.
ಊಟ ಮುಗಿಸಿ ಸ್ನೇಹಿತರೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಕಾರಿನಲ್ಲಿ ಹಿಂಬಾಲಿಸಿದ್ದ ಆರೋಪಿಗಳು, ಅವರ ವಾಹನಕ್ಕೆ ಡಿಕ್ಕಿ ಹೊಡೆದು ಕೆಳಗೆ ಬೀಳಿಸಿ ಬಳಿಕ ಮಾರಕಾಯುಧಗಳಿಂದ ಮನಬಂದಂತೆ ಹಲ್ಲೆ ನಡೆಸಿದ್ದರು.
ತೀವ್ರವಾಗಿ ಗಾಯಗೊಂಡ ವೆಂಕಟೇಶರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಹಳೆಯ ದ್ವೇಷ ಹಾಗೂ ಮಾರುತಿ ಎಂಬ ವ್ಯಕ್ತಿಯ ಚಿಕಿತ್ಸೆಗೆ ವೆಂಕಟೇಶ ನೆರವಾಗಿದ್ದೇ ಈ ಕೊಲೆಗೆ ಕಾರಣ ಎಂದು ಪೊಲೀಸರು ತನಿಖೆಯಲ್ಲಿ ತಿಳಿಸಿದ್ದರು.



