ಬೆಂಗಳೂರು: ಹಲವು ಮಹಿಳೆಯರಿಗೆ ಬ್ಲ್ಯಾಕ್ಮೇಲ್ ಮಾಡಿ ಲೈಂಗಿಕ ದೌರ್ಜನ್ಯ ಆರೋಪ ಸಂಬಂಧ ರಾಮನಗರ ಮಕ್ಕಳ ಆಯೋಗ ಸಮಿತಿ ಸದಸ್ಯನನ್ನು ಬೆಂಗಳೂರು ನಗರದ ಆರ್.ಆರ್.ನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿತನನ್ನು ಚಂದ್ರೇಗೌಡ ಎಂದು ಗುರುತಿಸಲಾಗಿದೆ.
ತನಿಖೆ ಪ್ರಕಾರ, ಆರೋಪಿ ಮಹಿಳೆಯರನ್ನು ಪರಿಚಯಿಸಿಕೊಂಡು ತಾನು ಪೊಲೀಸ್ ಅಧಿಕಾರಿ, ವಕೀಲ ಹಾಗೂ ಮಾಧ್ಯಮ ಪ್ರತಿನಿಧಿ ಎಂದು ನಕಲಿ ಗುರುತಿನ ಚೀಟಿಗಳನ್ನು ಬಳಸಿಕೊಂಡು ನಂಬಿಕೆ ಗಳಿಸುತ್ತಿದ್ದ. ನಂತರ ಮದುವೆಯ ಭರವಸೆ ನೀಡಿ ಲೈಂಗಿಕ ಸಂಬಂಧ ಬೆಳೆಸಿ, ಖಾಸಗಿ ಕ್ಷಣಗಳನ್ನು ವಿಡಿಯೋ ಹಾಗೂ ಫೋಟೋ ರೂಪದಲ್ಲಿ ದಾಖಲಿಸಿಕೊಂಡಿದ್ದಾನೆ ಎನ್ನಲಾಗಿದೆ.
ಆ ಬಳಿಕ ಅದೇ ದಾಖಲೆಗಳನ್ನು ಆಧಾರವನ್ನಾಗಿ ಮಾಡಿಕೊಂಡು ಮಹಿಳೆಯರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ. ಒಬ್ಬ ಸಂತ್ರಸ್ತೆಯಿಂದ ಸುಮಾರು 5 ಲಕ್ಷ ರೂ. ಪಡೆದಿರುವುದಾಗಿ ದೂರಿನಲ್ಲಿ ಉಲ್ಲೇಖವಾಗಿದೆ.
ಪೊಲೀಸ್ ಪರಿಶೀಲನೆಯಲ್ಲಿ ಆರೋಪಿ ಮೊಬೈಲ್ನಲ್ಲಿ 20ಕ್ಕೂ ಹೆಚ್ಚು ಮಹಿಳೆಯರ ವಿಡಿಯೋ ಹಾಗೂ ಫೋಟೋಗಳು ಪತ್ತೆಯಾಗಿದ್ದು, ಪ್ರಕರಣದ ಗಂಭೀರತೆ ಹೆಚ್ಚಿಸಿದೆ.



