ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳ ದೈನಂದಿನ ಆಹಾರದಲ್ಲಿ ಅಗತ್ಯ ಪೌಷ್ಠಿಕಾಂಶ ಇರುವಂತೆ ನೋಡಿಕೊಳ್ಳಬೇಕು. ಮಕ್ಕಳ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೌಷ್ಠಿಕ ಆಹಾರ ಅತ್ಯಂತ ಪ್ರಮುಖವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಸಿ.ಎಸ್. ಶಿವನಗೌಡರ ಹೇಳಿದರು.
ಲಕ್ಕುಂಡಿಯ ಶ್ರೀ ಅನ್ನದಾನೇಶ್ವರ ಮಠದ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಆಯುಷ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆಗಳ ಸಂಯುಕ್ತಾಶ್ರಯದಲ್ಲಿ ಸೆ.9ರಂದು ಆಯೋಜಿಸಿದ್ದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಪೋಷಣ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ರಾಧಾ ಜಿ. ಮಣ್ಣೂರ ಮಾತನಾಡಿ, ಸೆಪ್ಟೆಂಬರ್ನಲ್ಲಿ ನಡೆಯುತ್ತಿರುವ ಪೋಷಣ ಮಾಸಾಚರಣೆಯನ್ನು ‘ಹಮಾರಿ ಅಂಗನವಾಡಿ, ಹಮಾರಿ ಜಿಮ್ಮೆದಾರಿ’ (ನಮ್ಮ ಅಂಗನವಾಡಿ, ನಮ್ಮ ಜವಾಬ್ದಾರಿ) ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಅಂಗನವಾಡಿಗಳ ಜವಾಬ್ದಾರಿ ಕೇವಲ ಕಾರ್ಯಕರ್ತೆಯರಿಗೆ ಸೀಮಿತವಾಗಿರದೆ, ಇಡೀ ಸಮಾಜದ ಜವಾಬ್ದಾರಿಯಾಗಿದೆ ಎಂದರು.
ಗರ್ಭಿಣಿಯರು, ಬಾಣಂತಿಯರು, 0ರಿಂದ 6 ವರ್ಷದೊಳಗಿನ ಮಕ್ಕಳು ಹಾಗೂ ಕಿಶೋರಿಯರ ಆರೋಗ್ಯ ಮತ್ತು ಪೌಷ್ಠಿಕತೆ ಸುಧಾರಣೆಯಲ್ಲಿ ಅಂಗನವಾಡಿಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಸಿರಿಧಾನ್ಯಗಳ ಬಳಕೆ, ಶಾಲಾ ಪೂರ್ವ ಶಿಕ್ಷಣದ ಮಾದರಿಗಳು ಹಾಗೂ ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯ ಸೌಲಭ್ಯಗಳ ಕುರಿತು ಅವರು ಮಾಹಿತಿ ನೀಡಿದರು.
ಜಿಲ್ಲಾ ಆಯುಷ್ ಅಧಿಕಾರಿ ಜುಬೇದಾ ಟಿಗಳೇರ ಆಯುರ್ವೇದದ ಮಹತ್ವ ವಿವರಿಸಿದರು. ಲಕ್ಕುಂಡಿ ಗ್ರಾಪಂ ಪಿಡಿಒ ಅಮೀರನಾಯಕ ನೀರು, ನೈರ್ಮಲ್ಯ ಹಾಗೂ ಪರಿಸರ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಮನವಿ ಮಾಡಿದರು.
ಪೋಷಣ ಮಾಸಾಚರಣೆ ಅಂಗವಾಗಿ ಗರ್ಭಿಣಿಯರ ಸೀಮಂತ, ಅನ್ನಪ್ರಾಶನ, ಪೌಷ್ಠಿಕ ಆಹಾರದ ಪ್ರಾತ್ಯಕ್ಷಿಕೆ, ಆರೋಗ್ಯ ತಪಾಸಣೆ, ಮಾಹಿತಿ ಕೇಂದ್ರದ ಪ್ರದರ್ಶನ ಹಾಗೂ ‘ಬೇಟಿ ಬಚಾವೋ, ಬೇಟಿ ಪಡಾವೋ’ ಯೋಜನೆಯಡಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು. ಮಕ್ಕಳು ಹಣ್ಣು–ತರಕಾರಿಗಳ ವೇಷಭೂಷಣ ಧರಿಸಿ ಪೌಷ್ಠಿಕ ಆಹಾರದ ಮಹತ್ವ ಸಾರಿದರು.
ಮಕ್ಕಳ ಬೆಳವಣಿಗೆಯ ವಿವಿಧ ಹಂತಗಳ ಬಗ್ಗೆ ಪಾಲಕರು ವಿಶೇಷ ಗಮನಹರಿಸಿ, ಪೌಷ್ಠಿಕ ಆಹಾರ ನೀಡುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು.
— ಸಿ.ಎಸ್. ಶಿವನಗೌಡರ, ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ



