ಬೆಂಗಳೂರು: ಹಣಕಾಸಿನ ವಿವಾದದ ಹಿನ್ನೆಲೆಯಲ್ಲಿ 30 ವರ್ಷದ ಮಹಿಳೆಯನ್ನು ಅಪಹರಿಸಿ ಎರಡು ದಿನಗಳ ಕಾಲ ಬಂಧನದಲ್ಲಿರಿಸಿ ಹಲ್ಲೆ ನಡೆಸಿದ ಆರೋಪದಡಿ ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಜ್ರತ್ ಬೇಗಂ, ರೇಷ್ಮಾ ಭಾನು ಹಾಗೂ ಸುಹೇಲ್ ಬಂಧಿತ ಆರೋಪಿಗಳು.
ಸಂತ್ರಸ್ತ ಮಹಿಳೆ ನಜ್ರತ್ ಬೇಗಂ ಬಳಿ 50 ಸಾವಿರ ರೂಪಾಯಿ ಹಾಗೂ ರೇಷ್ಮಾ ಬಳಿ ಒಂದು ಲಕ್ಷ ರೂಪಾಯಿ ಸಾಲ ಪಡೆದಿದ್ದರು ಎನ್ನಲಾಗಿದೆ. ವಾರಕ್ಕೊಮ್ಮೆ ಬಡ್ಡಿ ಪಾವತಿಸುತ್ತಿದ್ದ ಮಹಿಳೆಗೆ ಕಳೆದ ಕೆಲವು ವಾರಗಳಿಂದ ಬಡ್ಡಿ ಕಟ್ಟಲು ಸಾಧ್ಯವಾಗಿರಲಿಲ್ಲ. ಇದರಿಂದ ಕೋಪಗೊಂಡ ಆರೋಪಿಗಳು ಆಗಸ್ಟ್ 27ರಂದು ಆಕೆಯನ್ನು ಮನೆಗೆ ಕರೆಸಿಕೊಂಡಿದ್ದರು.
ಬಳಿಕ ನಜ್ರತ್ ಬೇಗಂ ತನ್ನ ಮಗನೊಂದಿಗೆ ಮಹಿಳೆಯನ್ನು ಬಲವಂತವಾಗಿ ಆಟೋದಲ್ಲಿ ಕೂರಿಸಿಕೊಂಡು ಕುಂಬಳಗೋಡಿನಲ್ಲಿರುವ ರೇಷ್ಮಾ ಮನೆಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ. ಅಲ್ಲಿ ಮರದ ಕೋಲಿನಿಂದ ಹಲ್ಲೆ ನಡೆಸಿ, ಕೊಠಡಿಯಲ್ಲಿ ಕೂಡಿ ಹಾಕಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇಷ್ಟೇ ಅಲ್ಲದೆ, ನಜ್ರತ್ ಬೇಗಂ ಸಂತ್ರಸ್ತೆಯನ್ನು ಬೆತ್ತಲೆಗೊಳಿಸಿ ಮೊಬೈಲ್ನಲ್ಲಿ ವಿಡಿಯೋ ಚಿತ್ರೀಕರಿಸಿದ್ದಾಳೆ ಎನ್ನಲಾಗಿದ್ದು, ಹಣ ನೀಡದಿದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಬಳಿಕ ವಕೀಲರ ಬಳಿ ಕರೆದೊಯ್ದು ಕೆಲವು ದಾಖಲೆಗಳಿಗೆ ಬಲವಂತವಾಗಿ ಸಹಿ ಮಾಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಆಗಸ್ಟ್ 31ರಂದು ಶೌಚಾಲಯಕ್ಕೆ ತೆರಳುವ ವೇಳೆ ಸಂತ್ರಸ್ತೆ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಈ ವೇಳೆ ಸುಳಿವು ಪಡೆದು ಸ್ಥಳಕ್ಕೆ ಬಂದ ಪೊಲೀಸರು ಆಕೆಯನ್ನು ರಕ್ಷಿಸಿದ್ದಾರೆ. ಚಂದ್ರಾಲೇಔಟ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಆರೋಪಿಗಳು ಹಾಗೂ ಸಂತ್ರಸ್ತೆ ಸ್ನೇಹಿತರಾಗಿದ್ದು, ಹಣಕಾಸಿನ ವೈಷಮ್ಯದಿಂದ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.



