ವಿಜಯಸಾಕ್ಷಿ ಸುದ್ದಿ, ಗದಗ: “ಅಮ್ಮಾ… ಧರ್ಮ ಮಾಡಿ ತಾಯಿ… ದಯವಿಟ್ಟು ಇಲ್ಲ ಅನ್ನಬೇಡಿ… ನಿಮ್ಮ ಧರ್ಮ ನಿಮ್ಮನ್ನು, ನಿಮ್ಮ ಕುಟುಂಬವನ್ನು ಕಾಪಾಡುತ್ತದೆ… ಚಿಲ್ಲರೆ ಇಲ್ಲ ಅಂತ ಮಾತ್ರ ಹೇಳಬೇಡಿ… ದೇವರು ನಿಮಗೆ ಎಷ್ಟು ಶಕ್ತಿ ಕೊಟ್ಟಿದ್ದಾನೋ ಅಷ್ಟನ್ನಾದರೂ ಕೊಡಿ…”
ಇದು ರಸ್ತೆಯಲ್ಲಿ ಸಾಮಾನ್ಯ ಭಿಕ್ಷುಕರೊಬ್ಬರು ಕೇಳಿದ ಮಾತಲ್ಲ. ಬದಲಾಗಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರ ಹೇಳಿಕೆಯನ್ನು ಖಂಡಿಸಿ, ಶಿವರಾಮಕೃಷ್ಣ ಸೇವಾ ಟ್ರಸ್ಟ್ ಸಂಚಾಲಕ ರಾಜೂ ಖಾನಪ್ಪನವರ ನೇತೃತ್ವದಲ್ಲಿ ಹಿಂದೂ ಕಾರ್ಯಕರ್ತರು ನಡೆಸಿದ ವಿನೂತನ ಪ್ರತಿಭಟನೆಯ ದೃಶ್ಯವಿದು.
ಸಚಿವರಿಗೆ ಹಜ್ ಯಾತ್ರೆಗೆ ತೆರಳುವ ಆಸೆಯಿದ್ದರೆ, ಅದಕ್ಕಾಗಿ ಜನರಿಂದ ಭಿಕ್ಷೆ ಬೇಡಿ ಹಣ ಸಂಗ್ರಹಿಸಿ ವಿಮಾನದ ಟಿಕೆಟ್ ಕೊಡಿಸುತ್ತೇವೆ ಎಂಬ ವ್ಯಂಗ್ಯದ ಮೂಲಕ ಕಾರ್ಯಕರ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಗದಗ ನಗರದ ಹುಯಿಲಗೋಳ ನಾರಾಯಣರಾವ ವರ್ತುಲದಲ್ಲಿ ಶಿವರಾಮಕೃಷ್ಣ ಸೇವಾ ಟ್ರಸ್ಟ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಹಿಂದೂ ಕಾರ್ಯಕರ್ತರು ಕೈಯಲ್ಲಿ ಪಾತ್ರೆಗಳನ್ನು ಹಿಡಿದು ಸಾರ್ವಜನಿಕರಿಂದ ಭಿಕ್ಷೆ ಸಂಗ್ರಹಿಸಿದರು.
ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು ಇಸ್ಲಾಂ ಅತ್ಯುತ್ತಮ ಧರ್ಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿ, ತಮಗೂ ಹಜ್ ಯಾತ್ರೆಗೆ ತೆರಳುವ ಆಸೆಯಿದೆ ಎಂದು ಹೇಳಿದ್ದರು ಎಂದು ಪ್ರತಿಭಟನಾಕಾರರು ಆರೋಪಿಸಿದರು. ಅಲ್ಲದೆ, ಮಠ-ಮಂದಿರಗಳಿಗೆ ಹೋಗುವುದಿಲ್ಲ ಹಾಗೂ ಅಲ್ಲಿಗೆ ಹೋಗುವ ಅಗತ್ಯವಿಲ್ಲ ಎಂಬರ್ಥದಲ್ಲಿ ಸಚಿವರು ಮಾತನಾಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಈ ಹೇಳಿಕೆ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಜನಪ್ರತಿನಿಧಿಯಾಗಿರುವ ಸಚಿವರು ಎಲ್ಲ ಧರ್ಮಗಳ ನಂಬಿಕೆ, ಆಚರಣೆ ಹಾಗೂ ಧಾರ್ಮಿಕ ಕೇಂದ್ರಗಳನ್ನು ಸಮಾನ ಗೌರವದಿಂದ ಕಾಣಬೇಕು ಎಂದು ಆಗ್ರಹಿಸಿದರು.
ಭಿಕ್ಷಾಟನೆಯಲ್ಲೇ ವ್ಯಂಗ್ಯದ ಪ್ರತಿಭಟನೆ!
ಪ್ರತಿಭಟನೆಯ ಪ್ರಮುಖ ಆಕರ್ಷಣೆಯಾಗಿದ್ದು ಕಾರ್ಯಕರ್ತರ ವಿನೂತನ ಭಿಕ್ಷಾಟನೆ. ಸಾಮಾನ್ಯವಾಗಿ ಸಾಮಾಜಿಕ ಸೇವೆ ಅಥವಾ ನೆರವಿಗಾಗಿ ಭಿಕ್ಷೆ ಸಂಗ್ರಹಿಸುವ ಬದಲು, ಸಚಿವರ ಹೇಳಿಕೆಯನ್ನು ವ್ಯಂಗ್ಯಾತ್ಮಕವಾಗಿ ಖಂಡಿಸಲು ಕಾರ್ಯಕರ್ತರು ಈ ವಿಶಿಷ್ಟ ಮಾರ್ಗವನ್ನು ಅನುಸರಿಸಿದರು.
ಸಚಿವರಿಗೆ ನಿಜವಾಗಿಯೂ ಹಜ್ ಯಾತ್ರೆಗೆ ಹೋಗುವ ಆಸೆಯಿದ್ದರೆ, ನಾವು ಜನರಿಂದ ಭಿಕ್ಷೆ ಬೇಡಿ ಹಣ ಸಂಗ್ರಹಿಸುತ್ತೇವೆ. ಅದೇ ಹಣದಲ್ಲಿ ಅವರಿಗೆ ವಿಮಾನದ ಟಿಕೆಟ್ ಮಾಡಿಸಿಕೊಡುತ್ತೇವೆ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು.
ಈ ಮೂಲಕ ಧಾರ್ಮಿಕ ವಿಚಾರಗಳ ಕುರಿತು ರಾಜಕಾರಣಿಗಳು ಎಚ್ಚರಿಕೆಯಿಂದ ಹಾಗೂ ಜವಾಬ್ದಾರಿಯಿಂದ ಮಾತನಾಡಬೇಕು ಎಂಬ ಸಂದೇಶವನ್ನು ಕಾರ್ಯಕರ್ತರು ರವಾನಿಸಿದರು.
ಗದಗ-ಬೆಟಗೇರಿ ಅವಳಿ ನಗರದಲ್ಲಿ ನಡೆದ ಈ ವಿನೂತನ ಪ್ರತಿಭಟನೆ ಸಾರ್ವಜನಿಕರ ಗಮನ ಸೆಳೆಯಿತು. ಸುಮಾರು 200ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರತಿಭಟನೆಯಲ್ಲಿ ಮಹಾಂತೇಶ ಪಾಟೀಲ, ವೆಂಕಟೇಶ ದೊಡ್ಡಮನಿ, ಹುಲುಗಪ್ಪ ವಾಲ್ಮೀಕಿ, ಶಿವಯೋಗಿ ಹಿರೇಮಠ, ಮಹಾಬಲೇಶ್ವರ ಶೆಟ್ಟರ, ಈರಪ್ಪ ಹೆಬಸೂರು, ಸುನಿಲ್ ಮುಳ್ಳಾಳ, ಕಿರಣ ಹಿರೇಮಠ, ಕುಮಾರ ಮಿಟ್ಟಿಮಠ, ಅಶೋಕ ಬಜಂತ್ರಿ, ಕುಮಾರ ನಡಗೇರಿ, ಮಂಜು ಗುಡಿಮನಿ, ಭರತ್ ಲದ್ದಿ, ಈರಣ್ಣ ವಾಲ್ಮೀಕಿ, ಅಭಿಷೇಕ ಕುರ್ತಕೋಟಿ, ಶಿವಕುಮಾರ ಲದ್ದಿ, ಬಸವರಾಜ ಬನ್ನಿಮರದ, ಕೃಷ್ಣ ಹಂಡಿ, ಶರಣಪ್ಪ ಲಕ್ಕುಂಡಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಮಠ-ಮಂದಿರಗಳು ಕೇವಲ ಧಾರ್ಮಿಕ ಕೇಂದ್ರಗಳಲ್ಲ. ಅವುಗಳೊಂದಿಗೆ ಜನರ ಭಾವನೆ, ಸಂಸ್ಕೃತಿ ಹಾಗೂ ಪರಂಪರೆ ಬೆಸೆದುಕೊಂಡಿವೆ. ಅವುಗಳ ಕುರಿತು ಯಾರೂ ಲಘುವಾಗಿ ಮಾತನಾಡಬಾರದು. ಸಚಿವರು ತಮ್ಮ ಹೇಳಿಕೆಯನ್ನು ಸ್ಪಷ್ಟಪಡಿಸಬೇಕು ಅಥವಾ ಹಿಂಪಡೆಯಬೇಕು. ಸಚಿವರಿಗೆ ನಿಜವಾಗಿಯೂ ಹಜ್ ಯಾತ್ರೆಗೆ ತೆರಳುವ ತವಕವಿದ್ದರೆ, ಹಿಂದೂ ಸಂಘಟನೆಗಳ ಕಾರ್ಯಕರ್ತರು ರಸ್ತೆಯಲ್ಲಿ ಭಿಕ್ಷಾಟನೆ ನಡೆಸಿ ವಿಮಾನದ ಟಿಕೆಟ್ ಖರೀದಿಸಿ ಕೊಡುತ್ತೇವೆ.
— ರಾಜೂ ಖಾನಪ್ಪನವರ, ಹಿಂದೂ ಸಂಘಟನೆಗಳ ಮುಖಂಡ



