ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಗ್ರಾಮೀಣ ಪ್ರದೇಶದ ಕೂಲಿಕಾರರು ಗುಳೆ ಹೋಗುವುದನ್ನು ತಪ್ಪಿಸಿ ತಮ್ಮ ಊರಿನಲ್ಲಿಯೇ ಉದ್ಯೋಗ ಪಡೆದುಕೊಳ್ಳುವ ಮಹತ್ವಾಕಾಂಕ್ಷೆಯ ಉದ್ದೇಶದೊಂದಿಗೆ ವಿಬಿಜಿ-ರಾಮ್-ಜಿ ಯೋಜನೆಯಡಿ 125 ದಿನಗಳ ಉದ್ಯೋಗಾವಕಾಶ ಕಲ್ಪಿಸಲಾಗುತ್ತಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ. ಕಂದಕೂರ ಹೇಳಿದರು.
ತಾಲೂಕಿನ ನಿಡಗುಂದಿ ಗ್ರಾಮದ ಹೊಸ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಗುರುವಾರ ವಿಬಿಜಿ-ರಾಮ್-ಜಿ ಯೋಜನೆಯಡಿ ಆಯೋಜಿಸಿದ್ದ ವಿಭಿನ್ನ ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಚಟುವಟಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಕೂಲಿಕಾರರು ಉದ್ಯೋಗಕ್ಕಾಗಿ ದೂರದ ಊರುಗಳಿಗೆ ಗುಳೆ ಹೋಗುವ ಬದಲು, ತಮ್ಮ ಗ್ರಾಮದಲ್ಲಿಯೇ ಸರ್ಕಾರ ನಿಗದಿಪಡಿಸಿರುವ ದಿನಗಳವರೆಗೆ ಕೆಲಸ ನಿರ್ವಹಿಸಿ ಉದ್ಯೋಗ ಪಡೆಯಬೇಕು. ಯೋಜನೆಯಡಿ ಲಭ್ಯವಿರುವ ವೈಯಕ್ತಿಕ ಕಾಮಗಾರಿಗಳ ಸೌಲಭ್ಯವನ್ನೂ ಅರ್ಹರು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸರಿಯಾಗಿ ಕೆಲಸ ಮಾಡಿದರೆ ನಿರಂತರ ಉದ್ಯೋಗ
ವಿಬಿಜಿ-ರಾಮ್-ಜಿ ಯೋಜನೆಯಡಿ 125 ದಿನಗಳ ಕೆಲಸ ಪಡೆಯಲು ಕೂಲಿಕಾರರು ಜವಾಬ್ದಾರಿಯಿಂದ ಹಾಗೂ ಗುಣಮಟ್ಟದಿಂದ ಕೆಲಸ ನಿರ್ವಹಿಸಬೇಕು. ಕೂಲಿಕಾರರು ಸರಿಯಾಗಿ ಕೆಲಸ ಮಾಡಿದರೆ ಮಾತ್ರ ನಿರಂತರವಾಗಿ ಕೆಲಸ ನೀಡಲು ಸಾಧ್ಯವಾಗುತ್ತದೆ. ಆ ಮೂಲಕ 125 ದಿನಗಳ ಕಾಲ ಉದ್ಯೋಗದ ಸೌಲಭ್ಯ ಪಡೆದುಕೊಳ್ಳಬಹುದು ಎಂದು ಹೇಳಿದರು.
ಈ ನಿಟ್ಟಿನಲ್ಲಿ ನಿಡಗುಂದಿ ಗ್ರಾಮದ ಪ್ರತಿಯೊಬ್ಬ ಕೂಲಿಕಾರರೂ ಕಾಮಗಾರಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಯೋಜನೆಯ ಸಂಪೂರ್ಣ ಪ್ರಯೋಜನ ಪಡೆಯಬೇಕು ಎಂದು ಕರೆ ನೀಡಿದರು.
ಹೊಸ ಕೆರೆ ತಾಲೂಕಿಗೆ ಮಾದರಿಯಾಗಲಿ
ನಿಡಗುಂದಿ ಗ್ರಾಮದ ಹೊಸ ಕೆರೆ ಪ್ರಸ್ತುತ ತನ್ನ ಮೂಲ ಸ್ವರೂಪವನ್ನೇ ಕಳೆದುಕೊಂಡಿದೆ. ಕೆರೆಯಲ್ಲಿ ಮುಳ್ಳುಕಂಟಿಗಳು, ಗಿಡಗಂಟಿಗಳು ಹಾಗೂ ಜಾಲಿ ಮರಗಳು ಬೆಳೆದು, ಅಪಾರ ಪ್ರಮಾಣದಲ್ಲಿ ಹೂಳು ತುಂಬಿಕೊಂಡಿದೆ. ಇದರಿಂದ ಕೆರೆಯಲ್ಲಿ ನೀರು ನಿಲ್ಲದಂತಾಗಿದ್ದು, ಕೆರೆಯ ಆಕಾರವೂ ಹಾಳಾಗಿದೆ ಎಂದು ಅವರು ಹೇಳಿದರು.
ಕೆರೆಯ ಪುನಶ್ಚೇತನ ಹಾಗೂ ಅಭಿವೃದ್ಧಿಗಾಗಿ ವಿಬಿಜಿ-ರಾಮ್-ಜಿ ಯೋಜನೆಯಡಿ ಅಂದಾಜು 90 ಲಕ್ಷ ರೂ. ಮೊತ್ತದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕೂಲಿಕಾರರು ಶ್ರದ್ಧೆಯಿಂದ ಕೆಲಸ ನಿರ್ವಹಿಸಿ ಕೆರೆಯನ್ನು ಅಭಿವೃದ್ಧಿಪಡಿಸಿದರೆ, ನಿಡಗುಂದಿಯ ಹೊಸ ಕೆರೆ ತಾಲೂಕಿಗೆ ಮಾದರಿ ಕೆರೆಯಾಗಿ ರೂಪುಗೊಳ್ಳಬೇಕು ಎಂದು ಆಶಿಸಿದರು.
ಕೆರೆಯಲ್ಲೇ ಮೂಡಿದ ‘ವಿಬಿಜಿ-ರಾಮ್-ಜಿ’ ಅಕ್ಷರ!
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ನಿಡಗುಂದಿ ಗ್ರಾಮದ ಹೊಸ ಕೆರೆಯ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರ ಮೂಲಕ ‘ವಿಬಿಜಿ-ರಾಮ್-ಜಿ’ ಎಂಬ ಅಕ್ಷರಗಳನ್ನು ರೂಪಿಸಲಾಯಿತು. ಅಕ್ಷರಗಳ ಮಧ್ಯೆ ಮಹಿಳಾ ಕೂಲಿಕಾರರನ್ನು ಕುಳ್ಳಿರಿಸಿ, ಸುತ್ತಲೂ ಇತರ ಕೂಲಿಕಾರರನ್ನು ನಿಲ್ಲಿಸುವ ಮೂಲಕ ವಿನೂತನ ಹಾಗೂ ವಿಭಿನ್ನ ರೀತಿಯ ಐಇಸಿ ಚಟುವಟಿಕೆ ನಡೆಸಲಾಯಿತು.
ಈ ವಿಶಿಷ್ಟ ಕಾರ್ಯಕ್ರಮವು ಕೂಲಿಕಾರರ ಗಮನ ಸೆಳೆಯುವುದರ ಜತೆಗೆ ಯೋಜನೆಯ ಮಹತ್ವ, ಉದ್ಯೋಗಾವಕಾಶ ಹಾಗೂ ಅದರ ಪ್ರಯೋಜನಗಳ ಕುರಿತು ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಿತು.
ತಾಲೂಕಿನಾದ್ಯಂತ ಜಾಬ್ ಕಾರ್ಡ್ ಮೇಳ
ಸರ್ಕಾರ ಹಾಗೂ ಜಿಲ್ಲಾ ಪಂಚಾಯಿತಿ, ಗದಗ ಅವರ ನಿರ್ದೇಶನದಂತೆ ತಾಲೂಕಿನಾದ್ಯಂತ ಜಾಬ್ ಕಾರ್ಡ್ ಮೇಳ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಚಂದ್ರಶೇಖರ ಬಿ. ಕಂದಕೂರ ತಿಳಿಸಿದರು.
ಅಭಿಯಾನದಡಿ ಹೊಸ ಜಾಬ್ ಕಾರ್ಡ್ ಮಾಡಿಸುವುದು, ಈಗಾಗಲೇ ಇರುವ ಜಾಬ್ ಕಾರ್ಡ್ಗಳಲ್ಲಿ ಅಗತ್ಯ ತಿದ್ದುಪಡಿ ಮಾಡಿಸುವುದು ಹಾಗೂ ಇ-ಕೆವೈಸಿ ನವೀಕರಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಅರ್ಹ ಕೂಲಿಕಾರರು ಈ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಮತದಾರರ ಪಟ್ಟಿ ಪರಿಷ್ಕರಣೆಗೂ ಅವಕಾಶ
ಮತದಾರರ ಪಟ್ಟಿ ಪರಿಷ್ಕರಣೆ–2026ರ ಅಂಗವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ತಿದ್ದುಪಡಿ ಹಾಗೂ ಹೊಸದಾಗಿ ಹೆಸರು ಸೇರ್ಪಡೆ ಮಾಡಿಸಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಅವರು ಹೇಳಿದರು.
18 ವರ್ಷ ಮೇಲ್ಪಟ್ಟ ಯುವಕ-ಯುವತಿಯರು ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ಸೇರ್ಪಡೆ ಮಾಡಿಸಿಕೊಳ್ಳಬಹುದು. ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದು, ಅದರಲ್ಲಿ ಯಾವುದೇ ತಿದ್ದುಪಡಿ ಅಗತ್ಯವಿದ್ದರೆ ಸಂಬಂಧಪಟ್ಟ ಗ್ರಾಮದ ಬಿಎಲ್ಒ ಅವರನ್ನು ಸಂಪರ್ಕಿಸಿ ತಿದ್ದುಪಡಿ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅರ್ಹ ಮತದಾರರು ಮರು ಸೇರ್ಪಡೆಗೆ ಅವಕಾಶವಿದ್ದು, ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಮರೇಶ ಮೂಲಿಮನಿ, ಜಿಲ್ಲಾ ಐಇಸಿ ಸಂಯೋಜಕ ವಿ.ಎಸ್. ಸಜ್ಜನ್, ತಾಂತ್ರಿಕ ಸಹಾಯಕ ಅಜಯ್ ಹೂಗಾರ, ಬಿಲ್ ಕಲೆಕ್ಟರ್ ಮತ್ತಪ್ಪ, ಜಿಕೆಎಂ ಅನಿತಾ ಸಂಗನಾಳ, ಪಂಚಾಯಿತಿ ಸಿಬ್ಬಂದಿ, ಕಾಯಕ ಬಂಧುಗಳು ಹಾಗೂ ಕೂಲಿಕಾರರು ಉಪಸ್ಥಿತರಿದ್ದರು.
ಗ್ರಾಮೀಣ ಕೂಲಿಕಾರರು ಗುಳೆ ಹೋಗುವ ಬದಲು ತಮ್ಮ ಊರಿನಲ್ಲಿಯೇ ಲಭ್ಯವಾಗುವ ಉದ್ಯೋಗಾವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿದರೆ ವಿಬಿಜಿ-ರಾಮ್-ಜಿ ಯೋಜನೆಯಡಿ ನಿರಂತರ ಉದ್ಯೋಗ ದೊರೆಯಲಿದ್ದು, 125 ದಿನಗಳ ಕೆಲಸದ ಅವಕಾಶವನ್ನು ಪ್ರತಿಯೊಬ್ಬ ಅರ್ಹ ಕೂಲಿಕಾರರೂ ಬಳಸಿಕೊಳ್ಳಬೇಕು.
— ಚಂದ್ರಶೇಖರ ಬಿ. ಕಂದಕೂರ, ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯಿತಿ, ಗಜೇಂದ್ರಗಡ



