HomeIndia News8 ವರ್ಷಗಳಾದರೂ ನ್ಯಾಯಕ್ಕಾಗಿ ಹೋರಾಟ ಮುಂದುವರಿದಿದೆ: ಸಂಜೀವ್ ಭಟ್ ಪುತ್ರ-ಪುತ್ರಿ

8 ವರ್ಷಗಳಾದರೂ ನ್ಯಾಯಕ್ಕಾಗಿ ಹೋರಾಟ ಮುಂದುವರಿದಿದೆ: ಸಂಜೀವ್ ಭಟ್ ಪುತ್ರ-ಪುತ್ರಿ

For Dai;y Updates Join Our whatsapp Group

ನವದೆಹಲಿ: ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರ ಬಂಧನಕ್ಕೆ ಎಂಟು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅವರ ಪುತ್ರಿ ಆಕಾಶಿ ಭಟ್ ಮತ್ತು ಪುತ್ರ ಶಂತನು ಭಟ್ ಅವರು ಸೋಶಿಯಲ್ ಮೀಡಿಯದಲ್ಲಿ ಭಾವುಕ ಸಂದೇಶ ಹಂಚಿಕೊಂಡಿದ್ದು, ತಂದೆಯ ಬಿಡುಗಡೆ ಹಾಗೂ ನ್ಯಾಯಕ್ಕಾಗಿ ತಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದ್ದಾರೆ.

ಸೆ.5, 2018ರಂದು ತಮ್ಮ ಕುಟುಂಬದ ಪಾಲಿಗೆ ಕರಾಳ ದಿನವಾಗಿತ್ತು. ಅಂದು ತಮ್ಮ ತಂದೆಯನ್ನು ಬಂಧಿಸಿದ ಪರಿಣಾಮ ಕುಟುಂಬವೇ ಛಿದ್ರಗೊಂಡಿತು ಎಂದು ಅವರು ಆರೋಪಿಸಿದ್ದಾರೆ. ಕಳೆದ ಎಂಟು ವರ್ಷಗಳಲ್ಲಿ ಒಟ್ಟು 2,923 ದಿನಗಳನ್ನು ತಂದೆಯಿಂದ ದೂರ ಕಳೆದಿದ್ದೇವೆ. ಕ್ಯಾಲೆಂಡರ್‌ನಲ್ಲಿ ಎಂಟು ವರ್ಷಗಳು ಕಳೆದಿದ್ದರೂ, ಆ ಸೆಪ್ಟೆಂಬರ್ ಬೆಳಗಿನ ಘಟನೆ ತಮ್ಮ ಮನಸ್ಸಿನಲ್ಲಿ ಇನ್ನೂ ಹಾಗೆಯೇ ಉಳಿದಿದೆ ಎಂದು ಅವರು ಹೇಳಿದ್ದಾರೆ.

ತಮ್ಮ ತಂದೆ ಅಧಿಕಾರದ ಎದುರು ಮೌನವಾಗಿರುವ ಬದಲು ಸತ್ಯ ಮತ್ತು ಆತ್ಮಸಾಕ್ಷಿಯ ಪರವಾಗಿ ನಿಲ್ಲುವುದನ್ನು ಆಯ್ಕೆ ಮಾಡಿಕೊಂಡಿದ್ದರು. ಅಧಿಕಾರವನ್ನು ಪ್ರಶ್ನಿಸುವುದು ಅಪಾಯಕಾರಿಯಾಗಿದ್ದರೂ, ತಮ್ಮ ವೃತ್ತಿ, ಗೌರವ, ಸ್ವಾತಂತ್ರ್ಯ ಹಾಗೂ ವೈಯಕ್ತಿಕ ಬದುಕಿನ ಮೇಲಿನ ಪರಿಣಾಮಗಳನ್ನು ಅರಿತಿದ್ದರೂ ಅವರು ತಮ್ಮ ನಿಲುವಿನಿಂದ ಹಿಂದೆ ಸರಿಯಲಿಲ್ಲ ಎಂದು ಪುತ್ರ-ಪುತ್ರಿ ತಿಳಿಸಿದ್ದಾರೆ.

‘ಅದು ಕೇವಲ ಐಪಿಎಸ್ ಅಧಿಕಾರಿ ಅಲ್ಲ, ನಮ್ಮ ತಂದೆ’

ಸಂಜೀವ್ ಭಟ್ ಅವರು ಕೇವಲ ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುವ ಹೆಸರು ಅಥವಾ ಐಪಿಎಸ್ ಅಧಿಕಾರಿಯಷ್ಟೇ ಅಲ್ಲ. ಅವರು ತಮ್ಮ ತಂದೆಯಾಗಿದ್ದು, ಸ್ವಂತ ನೆಮ್ಮದಿ, ವೃತ್ತಿ ಮತ್ತು ಸ್ವಾತಂತ್ರ್ಯಕ್ಕಿಂತ ಕೆಲವು ತತ್ವಗಳು ದೊಡ್ಡವು ಎಂಬುದನ್ನು ನಮಗೆ ಕಲಿಸಿದ ವ್ಯಕ್ತಿ ಎಂದು ಅವರು ಹೇಳಿದ್ದಾರೆ.

ರಾಜಕೀಯ ಅಧಿಕಾರ ಮತ್ತು ಆಡಳಿತ ವ್ಯವಸ್ಥೆಯನ್ನು ಪ್ರಶ್ನಿಸಿದ ಕಾರಣ ತಮ್ಮ ತಂದೆ ವೈಯಕ್ತಿಕವಾಗಿ ದೊಡ್ಡ ಬೆಲೆ ತೆತ್ತಿದ್ದಾರೆ. ದ್ವೇಷ ಮತ್ತು ಹಿಂಸೆಗೆ ಒಳಗಾದ ಜನರ ಪರವಾಗಿ ಧ್ವನಿ ಎತ್ತಲು ಅವರು ತಮ್ಮ ವೃತ್ತಿ ಹಾಗೂ ಸ್ವಾತಂತ್ರ್ಯವನ್ನೇ ಪಣಕ್ಕಿಟ್ಟಿದ್ದರು ಎಂದು ಆಕಾಶಿ ಮತ್ತು ಶಂತನು ಭಟ್ ಹೇಳಿದ್ದಾರೆ.

ಎಂಟು ವರ್ಷಗಳ ಅವಧಿಯಲ್ಲಿ ತಮ್ಮ ತಂದೆಯ ಸ್ವಾತಂತ್ರ್ಯ ಕಸಿದುಕೊಳ್ಳಲಾಗಿದೆ, ವೃತ್ತಿ ನಾಶವಾಗಿದೆ ಹಾಗೂ ಕುಟುಂಬದಿಂದ ಅಮೂಲ್ಯ ವರ್ಷಗಳು ದೂರವಾಗಿವೆ. ಆದರೆ ಅವರ ಆತ್ಮಸಾಕ್ಷಿಯನ್ನು ಮಾತ್ರ ಯಾರಿಂದಲೂ ಬಂಧಿಸಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದ್ದಾರೆ.

ಸಂಸ್ಥೆಗಳ ಸ್ವಾಯತ್ತತೆ ಕುರಿತು ಪ್ರಶ್ನೆ

ಪ್ರಜಾಪ್ರಭುತ್ವ ಒಂದೇ ಕ್ಷಣದಲ್ಲಿ ನಾಶವಾಗುವುದಿಲ್ಲ. ಅಧಿಕಾರವನ್ನು ನಿಯಂತ್ರಿಸಬೇಕಾದ ಸಂಸ್ಥೆಗಳು ಅದೇ ಅಧಿಕಾರದ ಪ್ರಭಾವಕ್ಕೆ ಒಳಗಾದಾಗ, ನ್ಯಾಯಾಂಗವು ದುರ್ಬಲರ ಕೊನೆಯ ಆಶ್ರಯವಾಗಿ ಕಾರ್ಯನಿರ್ವಹಿಸಲು ವಿಫಲವಾದಾಗ ಹಾಗೂ ಕಾನೂನು ಪ್ರಕ್ರಿಯೆ ದುರುಪಯೋಗಕ್ಕೆ ಒಳಗಾದಾಗ ಪ್ರಜಾಪ್ರಭುತ್ವದ ಅಡಿಪಾಯ ನಿಧಾನವಾಗಿ ದುರ್ಬಲವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನ್ಯಾಯಾಂಗದ ಸ್ವಾತಂತ್ರ್ಯ, ಸಂಸ್ಥೆಗಳ ಸಮಗ್ರತೆ ಮತ್ತು ಕಾನೂನಿನ ಆಳ್ವಿಕೆ ಕೇವಲ ಸಂವಿಧಾನದ ಪದಗಳಲ್ಲ. ಅವು ಸಾಮಾನ್ಯ ನಾಗರಿಕರನ್ನು ರಾಜ್ಯದ ಅತಿಯಾದ ಅಧಿಕಾರದಿಂದ ರಕ್ಷಿಸುವ ಪ್ರಮುಖ ಕವಚಗಳಾಗಿವೆ. ಈ ಕವಚಗಳನ್ನು ಉಳಿಸಿಕೊಳ್ಳಲು ಜನರು ಪ್ರಶ್ನಿಸುವ ಧೈರ್ಯ ಹೊಂದಿರಬೇಕು ಎಂದು ಅವರು ಹೇಳಿದ್ದಾರೆ.

ಎಂಟು ವರ್ಷಗಳಿಂದ ತಮ್ಮ ತಂದೆಯ ವಿಚಾರದಲ್ಲಿ ಅಧಿಕಾರದ ವ್ಯವಸ್ಥೆ ಮತ್ತು ವಿವಿಧ ಸಂಸ್ಥೆಗಳ ನಡೆಗಳನ್ನು ಗಮನಿಸುತ್ತಿದ್ದೇವೆ. ತಮ್ಮ ತಂದೆಯನ್ನು ಮುರಿಯಲು ವ್ಯವಸ್ಥಿತ ಪ್ರಯತ್ನ ನಡೆದಿದ್ದರೂ, ಅವರು ಇನ್ನೂ ತಮ್ಮ ನಿಲುವಿನಲ್ಲಿ ಅಚಲವಾಗಿ ನಿಂತಿದ್ದಾರೆ ಎಂದು ಪುತ್ರ-ಪುತ್ರಿ ತಿಳಿಸಿದ್ದಾರೆ.

‘ಮೌನಕ್ಕೆ ಬೆಲೆ ತೆರಬೇಕಾಗುತ್ತದೆ’

ಅಧಿಕಾರವನ್ನು ಪ್ರಶ್ನಿಸಲು ಜನರು ಹೆದರಿ ಮೌನವಾಗುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಪ್ರಶ್ನಿಸುವ ಮನೋಭಾವ ಕಳೆದುಕೊಂಡರೆ ಸ್ವಾತಂತ್ರ್ಯವೂ ದುರ್ಬಲವಾಗುತ್ತದೆ. ಆದ್ದರಿಂದ ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಎಂದು ಅವರು ಹೇಳಿದ್ದಾರೆ.

ಇತ್ತೀಚೆಗೆ ದೇಶದ ವಿವಿಧ ಭಾಗಗಳಲ್ಲಿ ಜನರು ಮತ್ತೆ ಪ್ರಶ್ನಿಸಲು ಆರಂಭಿಸಿದ್ದಾರೆ. ಪ್ರಚಾರ, ಏಕಪಕ್ಷೀಯ ನಿರೂಪಣೆ ಹಾಗೂ ಭಯದ ವಾತಾವರಣವನ್ನು ಮೀರಿ ಜನರು ತಮ್ಮದೇ ಆದ ಪ್ರಶ್ನೆಗಳನ್ನು ಕೇಳುವ ಧೈರ್ಯ ತೋರುತ್ತಿದ್ದಾರೆ. ತಲೆತಗ್ಗಿಸಿ ಬದುಕುವಂತೆ ಕಲಿತಿದ್ದ ಹೊಸ ತಲೆಮಾರು ಇದೀಗ ತಲೆ ಎತ್ತಿ ಪ್ರಶ್ನಿಸುವತ್ತ ಹೆಜ್ಜೆ ಇಡುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಅವರು ಹೇಳಿದ್ದಾರೆ.

ಒಬ್ಬ ವ್ಯಕ್ತಿಯ ಧೈರ್ಯ ದೊಡ್ಡ ಅಧಿಕಾರ ವ್ಯವಸ್ಥೆಯ ಎದುರು ಸಣ್ಣದಾಗಿ ಕಾಣಬಹುದು. ಆದರೆ ಇತಿಹಾಸದಲ್ಲಿ ಅಧಿಕಾರಕ್ಕೆ ಬಗ್ಗದವರ ಹೋರಾಟವೇ ನೆನಪಿನಲ್ಲಿ ಉಳಿಯುತ್ತದೆ. ಒಬ್ಬರ ಧೈರ್ಯ ಲಕ್ಷಾಂತರ ಜನರಲ್ಲಿ ಧೈರ್ಯ ಮೂಡಿಸಬಲ್ಲದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘2,923 ದಿನಗಳ ನೋವು; ಹೋರಾಟ ಮಾತ್ರ ನಿಲ್ಲದು’

ಸೆ.5 ಕೇವಲ 2,923 ದಿನಗಳ ವಿಭಜನೆಯ ದಿನವಲ್ಲ; ನ್ಯಾಯಕ್ಕಾಗಿ ಎಂಟು ವರ್ಷಗಳಿಂದ ನಡೆಯುತ್ತಿರುವ ನಿರಂತರ ಹೋರಾಟದ ಸಂಕೇತವಾಗಿದೆ ಎಂದು ಆಕಾಶಿ ಮತ್ತು ಶಂತನು ಭಟ್ ಹೇಳಿದ್ದಾರೆ.

ಸಂಜೀವ್ ಭಟ್ ಅವರು ಅಧಿಕಾರವನ್ನು ಎದುರಿಸಲು ತೋರಿದ ಧೈರ್ಯವನ್ನು ಜನರು ನೆನಪಿಸಿಕೊಳ್ಳಬೇಕು. ನಾಗರಿಕರನ್ನು ರಕ್ಷಿಸಬೇಕಾದ ಸಂಸ್ಥೆಗಳು ಅವರ ವಿರುದ್ಧವೇ ಬಳಸಲ್ಪಟ್ಟರೆ ಏನಾಗಬಹುದು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ನ್ಯಾಯ ವಿಳಂಬವಾದಾಗ ಅದು ಕೇವಲ ಸಮಯದ ನಷ್ಟವಲ್ಲ; ನ್ಯಾಯಕ್ಕಾಗಿ ಸಮಾಜ ಎಷ್ಟು ಧೈರ್ಯದಿಂದ ಧ್ವನಿ ಎತ್ತುತ್ತದೆ ಎಂಬುದರ ಪರೀಕ್ಷೆಯೂ ಆಗಿದೆ ಎಂದು ಅವರು ಹೇಳಿದ್ದಾರೆ.

ತಮ್ಮ ತಂದೆ ದೇಶದ ಜಾತ್ಯತೀತ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಅವರ ಧ್ವನಿ ಏಕಾಂಗಿಯಾಗದಂತೆ ಎಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಎಂಟು ವರ್ಷಗಳ ನಂತರವೂ ಸಂಜೀವ್ ಭಟ್ ಅವರು ಧೈರ್ಯ ಕಳೆದುಕೊಂಡಿಲ್ಲ. ತಲೆತಗ್ಗಿಸದೆ, ತಮ್ಮ ಆತ್ಮಸಾಕ್ಷಿಯನ್ನು ಕಾಪಾಡಿಕೊಂಡು, ಹೋರಾಟ ಮುಂದುವರಿಸಿದ್ದಾರೆ. ‘ನಾವು ಕೂಡ ಬಗ್ಗುವುದಿಲ್ಲ, ಮೌನವಾಗುವುದಿಲ್ಲ, ಶರಣಾಗುವುದಿಲ್ಲ. ನ್ಯಾಯಕ್ಕಾಗಿ ನಮ್ಮ ಹೋರಾಟ ಮುಂದುವರಿಯಲಿದೆ’ ಎಂದು ಆಕಾಶಿ ಭಟ್ ಮತ್ತು ಶಂತನು ಭಟ್ ತಿಳಿಸಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img