ಅಮರಾವತಿ: ಏಳು ತಿಂಗಳ ವಿರಾಮದ ಬಳಿಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮತ್ತೊಂದು ಮಹತ್ವದ ಉಡಾವಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ GSLV-F17 ರಾಕೆಟ್ ಮೂಲಕ ಭಾರತದ ಮೊದಲ ಜಿಯೋಸಿಂಕ್ರೋನಸ್ ಇಮೇಜಿಂಗ್ ಉಪಗ್ರಹ EOS-05 ಅನ್ನು ಶುಕ್ರವಾರ ನಸುಕಿನ ಜಾವ 2.55ಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.
ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಉಡಾವಣಾ ಪ್ಯಾಡ್‌ನಿಂದ ಉಡಾವಣೆಯಾದ GSLV-F17, EOS-05 ಉಪಗ್ರಹವನ್ನು ನಿಗದಿತ ಸಬ್-ಜಿಯೋಸಿಂಕ್ರೋನಸ್ ಟ್ರಾನ್ಸ್‌ಫರ್ ಆರ್ಬಿಟ್ ಗೆ ಯಶಸ್ವಿಯಾಗಿ ನಿಯೋಜಿಸಿದೆ. ಇದು GSLV ರಾಕೆಟ್‌ನ 19ನೇ ಹಾರಾಟವಾಗಿದೆ.
ಭಾರತದ ಮೊದಲ ಜಿಯೋಸಿಂಕ್ರೋನಸ್ ಇಮೇಜಿಂಗ್ ಉಪಗ್ರಹ:
EOS-05 ಸಾಮಾನ್ಯ ಭೂ ವೀಕ್ಷಣಾ ಉಪಗ್ರಹಗಳಿಗಿಂತ ಭಿನ್ನವಾಗಿದೆ. ಜಿಯೋಸಿಂಕ್ರೋನಸ್ ಕಕ್ಷೆಯಿಂದ ಭೂಮಿಯ ದೊಡ್ಡ ಪ್ರದೇಶವನ್ನು ನಿರಂತರವಾಗಿ ವೀಕ್ಷಿಸುವ ಸಾಮರ್ಥ್ಯ ಇದಕ್ಕಿದೆ. ಈ ಮೂಲಕ ನಿರ್ದಿಷ್ಟ ಪ್ರದೇಶದ ಹವಾಮಾನ, ಪರಿಸರ ಸೇರಿದಂತೆ ವಿವಿಧ ಬದಲಾವಣೆಗಳನ್ನು ಕಡಿಮೆ ಸಮಯದ ಅಂತರದಲ್ಲಿ ಗಮನಿಸಲು ಸಾಧ್ಯವಾಗಲಿದೆ.
ಉಪಗ್ರಹದಿಂದ ದೊರೆಯುವ ಮಾಹಿತಿಯನ್ನು ಕೃಷಿ, ಜಲ ಸಂಪನ್ಮೂಲ ನಿರ್ವಹಣೆ, ನಗರ ಯೋಜನೆ, ಪರಿಸರ ಮೇಲ್ವಿಚಾರಣೆ, ಅರಣ್ಯ, ಸಾಗರ ಸಂಪನ್ಮೂಲ ಹಾಗೂ ಪ್ರಕೃತಿ ವಿಕೋಪ ನಿರ್ವಹಣೆಯಂತಹ ಕ್ಷೇತ್ರಗಳಲ್ಲಿ ಬಳಸಬಹುದಾಗಿದೆ.
ರೈತರಿಗೆ ಹೇಗೆ ಸಹಾಯ?
EOS-05ನ ಭೂ ವೀಕ್ಷಣಾ ಸಾಮರ್ಥ್ಯವು ಕೃಷಿ ಕ್ಷೇತ್ರಕ್ಕೂ ಉಪಯುಕ್ತವಾಗುವ ನಿರೀಕ್ಷೆಯಿದೆ. ಉಪಗ್ರಹ ಚಿತ್ರಗಳ ಮೂಲಕ ಬೆಳೆ ಪ್ರದೇಶ, ಬೆಳೆ ಬೆಳವಣಿಗೆ, ಬರ ಪರಿಸ್ಥಿತಿ ಹಾಗೂ ಬೆಳೆ ಹಾನಿಯಂತಹ ಬದಲಾವಣೆಗಳನ್ನು ದೊಡ್ಡ ಪ್ರಮಾಣದಲ್ಲಿ ಮೇಲ್ವಿಚಾರಣೆ ಮಾಡಬಹುದು. ಈ ಮಾಹಿತಿಯನ್ನು ಬೆಳೆ ಅಂದಾಜು, ಬರ ನಿರ್ವಹಣೆ ಮತ್ತು ಇತರ ಕೃಷಿ ಸಂಬಂಧಿತ ಯೋಜನೆಗಳಿಗೆ ಬಳಸುವ ಸಾಧ್ಯತೆಯಿದೆ.
ಏಳು ತಿಂಗಳ ಬಳಿಕ ಇಸ್ರೋ ಉಡಾವಣಾ ಹಾದಿಗೆ:
2026ರ ಜನವರಿ 12ರಂದು PSLV-C62/EOS-N1 ಮಿಷನ್ ಉಡಾವಣೆಯಾಗಿತ್ತು. ಆದರೆ ಮಿಷನ್ ಯಶಸ್ವಿಯಾಗದೆ, ಬಳಿಕ ಕಾರಣ ಪತ್ತೆಹಚ್ಚಲು ವಿವರವಾದ ಪರಿಶೀಲನೆ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಮುಖ ಉಡಾವಣೆಗಳ ನಡುವೆ ಸುಮಾರು ಏಳು ತಿಂಗಳ ಅಂತರ ಕಂಡುಬಂದಿತ್ತು. ಇದೀಗ GSLV-F17/EOS-05 ಮಿಷನ್ ಯಶಸ್ವಿಯಾಗುವ ಮೂಲಕ ಇಸ್ರೋ ಮತ್ತೆ ಮಹತ್ವದ ಉಡಾವಣಾ ಹಾದಿಗೆ ಮರಳಿದೆ.
ಈ ಯಶಸ್ವಿ ಮಿಷನ್ ಭಾರತದ ಭೂ ವೀಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಜೊತೆಗೆ, ಜಿಯೋಸಿಂಕ್ರೋನಸ್ ಕಕ್ಷೆಯಿಂದ ನಿರಂತರ ಭೂ ವೀಕ್ಷಣೆಯಲ್ಲಿ ದೇಶದ ಸಾಮರ್ಥ್ಯಕ್ಕೆ ಹೊಸ ಅಧ್ಯಾಯವನ್ನು ತೆರೆದಿದೆ.



